Teachers for Inclusive Society

ಎಲ್ಲರಿಗೂ ಶಿಕ್ಷಣದ ಭರವಸೆಯತ್ತ ಮುಂದಾಳತ್ವ

ಚಿಕ್ಕ ಮಂಡ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು (ಸ.ಹಿ.ಪ್ರಾ. ಶಾಲೆ) 1951ರಲ್ಲೂ ಮತ್ತು ಶಿಶುವಿಹಾರವನ್ನು 2016ರಲ್ಲೂ ಆರಂಭಿಸಲಾಯಿತು.

Print Friendly, PDF & Email

ಎಲ್ಲರಿಗೂ ಶಿಕ್ಷಣದ ಭರವಸೆಯತ್ತ ಮುಂದಾಳತ್ವ 

ಶ್ರೀನಿವಾಸಮೂರ್ತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಮಂಡ್ಯ, ಮಂಡ್ಯ ಜಿಲ್ಲೆ

ಲೇ: ರಾಜಶ್ರೀ ಶ್ರೀನಿವಾಸನ್

This is a translation of the article originally written in English

ಶಾಲೆಯ ಹಿನ್ನೆಲೆ:

ಚಿಕ್ಕ ಮಂಡ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು (ಸ.ಹಿ.ಪ್ರಾ. ಶಾಲೆ) 1951ರಲ್ಲೂ ಮತ್ತು ಶಿಶುವಿಹಾರವನ್ನು 2016ರಲ್ಲೂ ಆರಂಭಿಸಲಾಯಿತು. ಚಿಕ್ಕ ಮಂಡ್ಯ, ಮಂಡ್ಯ ದಕ್ಷಿಣ ಕ್ಷೇತ್ರದ ಗೋಪಾಲಪುರ ಕ್ಲಸ್ಟರ್‍ನಲ್ಲಿನ ಒಂದು ಹಳ್ಳಿ. ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿಯಲ್ಲಿನ ಈ ಹಳ್ಳಿಯಲ್ಲಿ 2,610 ಕುಟುಂಬಗಳನ್ನೊಳಗೊಂಡ 810 ಮನೆಗಳಿವೆ. ಕೃಷಿ ಕಾರ್ಮಿಕರಾಗಿ, ಹಾಸಿಗೆ ಕಾರ್ಖಾನೆ, ಉಡುಗೆ ಕಾರ್ಖಾನೆ, ಬೀಡಿ ಸುತ್ತುವ ಕಾರ್ಖಾನೆ ಮತ್ತಿತರೆಡೆ ಕೂಲಿ ಕೆಲಸಗಾರರಾಗಿ ಇವರುಗಳು ದುಡಿಯುತ್ತಾರೆ. ಚಿಕ್ಕ ಮಂಡ್ಯದಿಂದ ಒಂದು ಕಿ.ಮೀ. ದೂರದಲ್ಲಿ ಒಂದು ಸಾವಿರದಷ್ಟು ಕುಟುಂಬಗಳ ಜನವಸತಿ ಇದೆ. ಹೆಚ್ಚಾಗಿ ಮುಸ್ಲಿಮರೇ ಇರುವ ಇಲ್ಲಿ ಹೆಂಗಸರು ಬೀಡಿ ಸುತ್ತುವ ಕಾಯಕದಲ್ಲೂ ಗಂಡಸರು ದಿನಗೂಲಿ ಕೆಲಸಗಾರರಾಗಿಯೂ ಜೀವನ ನಿರ್ವಹಣೆ ಮಾಡುತ್ತಾರೆ. ಸರ್ಕಾರ ಇವರಿಗೆ ಸಣ್ಣ (ಸುಮಾರು 600 ಚದರಡಿಯಷ್ಟು ಅಳತೆಯ) ಮನೆಗಳನ್ನು ಕಟ್ಟಿಸಿ ಕೊಟ್ಟಿದೆ. ಬಹಪಾಲು ಎಲ್ಲರೂ ಬಡವರೇ. ಸ.ಹಿ.ಪ್ರಾ. ಶಾಲೆಗೆ ಬರುವ ಹೆಚ್ಚಿನವರು ಇಲ್ಲಿನವರೇ. ಸ.ಹಿ.ಪ್ರಾ. ಶಾಲೆಯಲ್ಲಿ ಸುಮಾರು 185 ಮಕ್ಕಳು ಮತ್ತು ಶಿಶಿವಿಹಾರದಲ್ಲಿ 36 ಮಕ್ಕಳು ಇದ್ದು, ಅದರಲ್ಲಿ ಸ.ಹಿ.ಪ್ರಾ. ದ 81 ಮಕ್ಕಳು (ದಾಖಲಾದವರಲ್ಲಿ 44%), ಶಿಶುವಿಹಾರದ 9 ಮಕ್ಕಳು ಮುಸ್ಲಿಂ ಸಮುದಾಯದವರು.

ಮೂರ್ತಿಯವರ ವ್ಯಕ್ತಿತ್ವ ಚಿತ್ರಣ:

ಶ್ರೀನಿವಾಸಮೂರ್ತಿ (ಮೂರ್ತಿ ಎಂದೇ ಎಲ್ಲರೂ ಕರೆಯುವುದು) ಈ ಶಾಲೆಯ ಮುಖ್ಯ ಶಿಕ್ಷಕರು (ಮು.ಶಿ.). ಅವರು ಒಂದು ಹಳ್ಳಿಯ ಕುಟುಂಬದಲ್ಲಿ ನಾಲ್ಕು ಮಕ್ಕಳಲ್ಲಿ ಒಬ್ಬರಾಗಿ ಬೆಳೆದರು. ಅವರ ಹಳ್ಳಿಯಲ್ಲಿ ಸಾಮಾಜಿಕ ಪರಿವರ್ತಕರೆಂದೇ ಹೆಸರು ಮಾಡಿದ್ದ ಅವರ ತಂದೆಯವರ ಪ್ರಭಾವ ಇವರ ಮೇಲೆ ಬಹಳವೇ ಆಗಿದೆ. ಇವರನ್ನು ಶಿಕ್ಷಕನಾಗುವುದಕ್ಕೆ ಪ್ರೇರೇಪಿಸಿದವರು ಪ್ರೌಢಶಾಲೆಯಲ್ಲಿ ಇವರ ಶಿಕ್ಷಕರಾಗಿದ್ದ ಅಬ್ದುಲ್ ಲತೀಫ್ ಅವರು. ಮಂಡ್ಯದ ಮಾರಗೌಡನಹಳ್ಳಿಯಲ್ಲಿ 9 ವರ್ಷ ಶಿಕ್ಷಕರಾಗಿದ್ದು, ಬಡ್ತಿ ಪಡೆದು ಮು.ಶಿ. ಆಗಿ ಈ ಶಾಲೆಗೆ 2007ರಲ್ಲಿ ಬಂದರು. ಶಾಲಾ ಅಭಿವೃದ್ಧಿ ಪರಿವೀಕ್ಷಣಾ ಸಮಿತಿಯು, ಶಾಲೆಯ ಅಭಿವೃದ್ಧಿಯೆಡೆಗಿನ ಅವರ ಸಾಮರ್ಥ್ಯದ ಮೇಲೆ ಅಪಾರ ವಿಶ್ವಾಸ ವ್ಯಕ್ತಪಡಿಸಿತು. ಅದು ಮೂರ್ತಿಯವರಿಗೆ ಶಾಲೆಯನ್ನು ಈಗಿರುವಂತೆ ಉತ್ತಮವಾಗಿ ರೂಪಿಸಲು ಸ್ಫೂರ್ತಿ ನೀಡಿತು.

ಮಕ್ಕಳೆಡೆಗಿನ ಬದ್ಧತೆಗೆ ನಾಯಕತ್ವ:

ಸವಾಲುಗಳ ಸುರಿಮಳೆಗಳ ನಡುವೆಯೂ ಮೂರ್ತಿಯವರು ತಮ್ಮ ಶಾಲೆಯನ್ನು ಮಕ್ಕಳ ಸ್ನೇಹಿಯಾಗಿಯೇ ಇರುವಂತೆ ಮಾಡುವುದಕ್ಕಾಗಿ ಹೆಣಗಲು ಪ್ರೇರಕ ಶಕ್ತಿ ಯಾವುದು? ಮೂರ್ತಿಯವರ ಯಾವ ನಾಯಕತ್ವದ ಗುಣಗಳು ಶಾಲೆಯ ಹೆಚ್ಚಿನ ದಾಖಲಾತಿಗೂ ಹಾಗೂ ಮಕ್ಕಳ ಮುಂದುವರಿಕೆಗೂ ಕಾರಣವಾಗಿವೆ? ಶಾಲೆಯ ಬೆಳವಣಿಗೆಗೆ ಯಾವ ಯಾವ ಸಂಪನ್ಮೂಲಗಳು ಸಹಾಯಕವಾಗಿವೆ? ಮುಖ್ಯ ಶಿಕ್ಷಕರು ಆಗಿ ಮೂರ್ತಿಯವರ ಯಾವ ಬಗೆಯ ಕಾರ್ಯನೀತಿಗಳು ಮಕ್ಕಳನ್ನು ಶಾಲೆಗೆ ಸೆಳೆಯುತ್ತವೆ? ಸಮಾಜದ ಅವಕಾಶ ವಂಚಿತ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಪ್ರಯಾಸದ ಪ್ರಕ್ರಿಯೆಯು ಸವಾಲು, ಅಡೆತಡೆಗಳಿಂದ ಕಗ್ಗಂಟಾಗಿರುವಾಗ, ಮೂರ್ತಿಯವರದು ಆಶಾಕಿರಣದ, ಸ್ಥೈರ್ಯದ ಮತ್ತು ಹುರಿದುಂಬಿಸುವ ಕಥನವೇ ಸರಿ. ಮೂರ್ತಿಯವರೊಡನೆಯ ನಮ್ಮ ಸಂವಾದದಲ್ಲಿ, ಕಲಿಕೆಗಾಗಿ ಚಿಕ್ಕಮಂಡ್ಯದ ಸ.ಹಿ.ಪ್ರಾ. ಶಾಲೆಗೇ ಮಕ್ಕಳನ್ನು ಕಳುಹಿಸಲು ಪೋಷಕರು ಇಚ್ಛಿಸಲು ಮುಖ್ಯಕಾರಣಗಳನ್ನು ಗುರುತಿಸಿ ಹೇಳಿ ಎಂದು ಕೇಳಿದೆವು. ಅವರು ಆರು ಮುಖ್ಯ ಕಾರಣಗಳನ್ನು ಹಂಚಿಕೊಂಡರು. ನಾವು ಆ ಆರು ಕಾರಣಗಳನ್ನು ಮೂರ್ತಿಯವರ ಮುಖ್ಯ ಶಿಕ್ಷಕ ಕೆಲಸವನ್ನು ವಿಶ್ಲೇಷಿಸುವ ಚೌಕಟ್ಟನ್ನಾಗಿ ಉಪಯೋಗಿಸುತ್ತಿದ್ದೇವೆ:

• ಕನ್ನಡದ ಕಲಿಕೆಗೆ ಒತ್ತು ನೀಡುವುದು

• ಶಾಲೆಗೂ ಮನೆಗೂ ಸಂಪರ್ಕ

• ಮಕ್ಕಳ ಬಗ್ಗೆ ಕಾಳಜಿ, ಕಳಕಳಿ

• ಪಠ್ಯ, ಸಹ-ಪಠ್ಯ ಎರಡರ ಬಗೆಗೂ ಸಮಾನ ಒತ್ತು ನೀಡುವುದು

• ಮಕ್ಕಳ ಶಿಕ್ಷಣ ಹಕ್ಕಿನ ರಕ್ಷಣೆ

• ಕೂಡುಕೆಲಸ

ಕನ್ನಡದ ಕಲಿಕೆಗೆ ಒತ್ತು ನೀಡುವುದು:

ಮುಸ್ಲಿಂ ಸಮುದಾಯದ ಬಹಳಷ್ಟು ಪೋಷಕರು ತಮ್ಮ ಮಕ್ಕಳು ಮದ್ರಸಾಗೋ ಇಲ್ಲವೇ ಉರ್ದು ಮಾಧ್ಯಮದ ಶಾಲೆಗೋ ಸೇರಲೆಂದು ಬಯಸುತ್ತಾರೆ. ಉರ್ದು ಮಾಧ್ಯಮದಲ್ಲಿನ ಶಿಕ್ಷಣಕ್ಕೆ ಕರ್ನಾಟಕದಲ್ಲಿನ ಪ್ರಾಶಸ್ತ್ಯವನ್ನು ಸಚ್ಚರ್ ಸಮಿತಿ (सच्चर कमेटी ) ವರದಿ (2006) ಕೂಡ ಉಲ್ಲೇಖಿಸಿದೆ. ಸರ್ಕಾರವು ಮಾತೃಭಾಷಾ ಶಿಕ್ಷಣದ ಸಾಂವಿಧಾನಿಕ ಬದ್ಧತೆಯಿಂದಾಗಿ ಶಾಲೆಗಳಲ್ಲಿ ಉರ್ದು ಮಾಧ್ಯಮವನ್ನು ಬೆಂಬಲಿಸುತ್ತಿದ್ದರೂ ಕೂಡಾ ಉರ್ದು ಮಾಧ್ಯಮ ಶಾಲೆಗಳು ಭೌಗೋಳಿಕವಾಗಿ ಅಸಮರ್ಪಕವಾಗಿ ಹರಡಿವೆ. ಮಂಡ್ಯದಲ್ಲಿ ಉರ್ದು ಮಾಧ್ಯಮದ ಪ್ರೌಢಶಾಲೆಗಳಿಲ್ಲ. ಅದರಿಂದಾಗಿ  ಮುಸ್ಲಿಂ ಸಮುದಾಯದ ಅದರಲ್ಲೂ ಆರ್ಥಿಕವಾಗಿ ದುರ್ಬಲರಾದವರು ಕನ್ನಡ ಮಾಧ್ಯಮ ಶಾಲೆಗೇ ಸೇರಬೇಕು. ಉರ್ದು ಮಾಧ್ಯಮ ಶಾಲೆಗಳಿಲ್ಲವೆಂದೋ, ಇಲ್ಲವೇ ಕನ್ನಡ ಕಲಿಯುವದು ಕಷ್ಟವೆಂದೋ ಶಾಲಾ ಶಿಕ್ಷಣವನ್ನು ಮುಂದುವರೆಸುವುದೇ ಇಲ್ಲ. ಈ ಸನ್ನಿವೇಶದಲ್ಲಿ ಕನ್ನಡದಲ್ಲಿ ಶಿಕ್ಷಣ ಪಡೆಯುವುದು, ಶಿಕ್ಷಣ ಮುಂದುವರಿಸದೇ ಇರುವುದಕ್ಕಿಂತಲೂ ಹೇಗೆ ಒಳ್ಳೆಯದು ಎಂದು ಪೋಷಕರಿಗೆ ತಿಳಿಹೇಳುವುದರಲ್ಲಿ ಮೂರ್ತಿಯವರು ಮುಖ್ಯ ಪಾತ್ರ ವಹಿಸುತ್ತಾರೆ. ಮೇಲಾಗಿ ಸ.ಹಿ.ಪ್ರಾ. ಶಾಲೆಯಲ್ಲಿ ಮೊದಲಿನಿಂದಲೇ ಸೇರಿಸಿದರೆ, ಭಾಷೆಯ ತೊಡಕಿಲ್ಲದೇ ಶಿಕ್ಷಣ ಮುಂದುವರೆಸುವುದು ಹೇಗೆ ಸುಲಭವೆಂದೂ ಮನವರಿಕೆ ಮಾಡಿಕೊಡುತ್ತಾರೆ. ಸ.ಹಿ.ಪ್ರಾ. ಶಾಲೆಗೆ ಸೇರುವುದರಿಂದ ಅವರ ಮಕ್ಕಳು ಮೂರು ಹೊಸ ಭಾಷೆಗಳನ್ನೂ – ಕನ್ನಡ, ಇಂಗ್ಲೀಷ್ ಮತ್ತು ಹಿಂದಿ- ಉತ್ತಮವಾಗಿ ಕಲಿಯಬಹುದೆಂದೂ ಮನವರಿಕೆ ಮಾಡಿಕೊಡುತ್ತಾರೆ. 1ರಿಂದ 7ನೇ ತರಗತಿಯವರೆಗಿನ ಮುಸ್ಲಿಂ ಮಕ್ಕಳಿಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ 1000 ರೂಪಾಯಿಗಳ ವಿದ್ಯಾರ್ಥಿ ವೇತನವನ್ನೂ ನೀಡುತ್ತದೆ. ಇದಕ್ಕೆ ಅಗತ್ಯವಾದ ದಾಖಲೆಗಳನ್ನು ಹೊಂದಿಸುವುದು ಪೋಷಕರಿಗೆ ಕಷ್ಟವಾಗುತ್ತಿತ್ತು. ಮೂರ್ತಿಯವರು ಇದರಲ್ಲೂ ಸಹಾಯ ಮಾಡುತ್ತಾರೆ. ಅವರ ಶಾಲೆ ಕೇವಲ ಹಿರಿಯ ಪ್ರಾಥಮಿಕ ಶಾಲೆ ಆದ್ದರಿಂದ, ನಂತರದಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಮುಂದಿನ ಶಾಲೆಗೆ ಸೇರುವುದರ ಬಗ್ಗೆಯೂ ಗಮನವಿಟ್ಟಿರುತ್ತಾರೆ. ಅವರ ಶಾಲೆಯಿಂದ ನೇರವಾಗಿ ಪ್ರೌಢಶಾಲೆಗೆ ವರ್ಗಾವಣೆ ಪತ್ರ ಹೋಗುವುದರಿಂದ, ಅವರಿಗೆ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಗಮನಿಸುವುದು ಸಾಧ್ಯವಾಗಿದೆ. ಮುಸ್ಲಿಮರಲ್ಲಿ ಶಾಲೆಯಿಂದ ಹೊರಬೀಳುವ ಮಕ್ಕಳ ಸಂಖ್ಯೆ ಕರ್ನಾಟಕದಲ್ಲೇ ಅತಿ ಹೆಚ್ಚಿರುವುದರಿಂದ, “ಮುಸ್ಲಿಂ ಸಮುದಾಯದ ಎಲ್ಲ ಮಕ್ಕಳೂ ಕನ್ನಡವನ್ನು ಓದಲು, ಬರೆಯಲು ಮತ್ತು ಮಾತನಾಡಲು ಕಲಿಯುತ್ತಾರೆ” ಎಂಬ ಮೂರ್ತಿಯವರ ಕಾಣ್ಕೆ ವಿವೇಕಯುತವಾದದ್ದು.

ಶಾಲೆಗೂ ಮನೆಗೂ ಸಂಪರ್ಕ:

ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಪೋಷಕರಲ್ಲಿ ನಂಬಿಕೆ ಇದ್ದರೆ ಮಕ್ಕಳು ಶಾಲೆಯ ಹೊರಗುಳಿಯದಂತೆ ನೋಡಿಕೊಳ್ಳಬಲ್ಲರು. ಕಾಡುವ ಬಡತನದ ಬಲಿಪಶುಗಳು ಮಕ್ಕಳೇ ಆಗಿರುತ್ತಾರೆ. ಬಡತನದಲ್ಲಿರುವ ಪೋಷಕರು ಸಾಧಾರಣವಾಗಿ ಮುಂಚಿನಿಂದಲೂ ಬಂದ ಹಲವಾರು ಸಮಸ್ಯೆಗಳೊಡನೆ ಜೀವನ ಸಾಗಿಸುತ್ತಿರುತ್ತಾರೆ. ಹಣಕಾಸಿನ ಮುಗ್ಗಟ್ಟು, ಸಾಲಗಳು, ಕಿರಿದಾದ ಮನೆಗಳು, ದೊಡ್ಡ ಸಂಸಾರ, ಸ್ವಂತದ ಕೆಟ್ಟ ಶಾಲಾ ಅನುಭವಗಳು ಮುಂತಾದ ಅವರ ಜೀವನ ಸತ್ಯಗಳು ಶಿಕ್ಷಕರು ಅವರೊಡನೆ ಸೌಹಾರ್ದ ಸಂಬಂಧ ಬೆಳೆಸುವುದನ್ನು ಕ್ಲಿಷ್ಟಕರ ಮಾಡುತ್ತದೆ. ಇವೆಲ್ಲ ಸಮಸ್ಯೆಗಳನ್ನೂ ಪರಿಗಣಿಸಿದಾಗಲೇ, ಮಕ್ಕಳ ಕುಟುಂಬದೊಡನೆ ಫಲಪ್ರದ ಸಂಬಂಧ ಮತ್ತು ಮಾತುಕತೆಯೇ ತಮ್ಮ ಬಲು ಮೇಲ್ಮೆಯ ಪಾತ್ರ ಎಂದು ಮೂರ್ತಿಯವರಿಗೆ ಅನಿಸಿದ್ದು. ಅವರು ಹೇಗಿದ್ದಾರೋ, ಏನಾಗಿದ್ದಾರೋ ಅದನ್ನು ಗೌರವಿಸುತ್ತಾ, ಪೋಷಕರೊಡನೆ ಸ್ನೇಹದಿಂದಿರುವುದರಲ್ಲಿ ಮೂರ್ತಿಯವರಿಗೆ ಬಲು ಆನಂದ ದೊರೆಯುತ್ತದೆ. ಎಲ್ಲ ತಂದೆತಾಯಂದಿರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನೇ ಆಶಿಸುತ್ತಾರೆಂದು ಬಲವಾಗಿ ನಂಬಿರುವ ಮೂರ್ತಿಯವರು ಅವರಿಂದ ಮನೆಯಲ್ಲಿ ಮಕ್ಕಳಿಗೆ ಯಾವುದೇ ಶೈಕ್ಷಣಿಕ ಬೆಂಬಲ ದೊರೆಯದೆಂದೂ ಬಲ್ಲರು. ಹಾಗಾಗಿಯೇ ಮೂರ್ತಿಯವರು, ಶಾಲೆಯಿಂದ ಹಿಂದಿರುಗಿದ ಮಕ್ಕಳಿಗೆ ಅಭ್ಯಾಸ ಮಾಡಲು ಸಮಯ ಕೊಡಿ, ಕೇವಲ ಮನೆಗೆಲಸಗಳಲ್ಲಿ ಮುಳುಗಿರದಿರಲಿ ಎಂದು ತಂದೆತಾಯಿಯರನ್ನು ಬೇಡುತ್ತಾರೆ. ಶನಿವಾರಗಳಂದು ಮೂರ್ತಿಯವರು ಕೇರಿಯ ಸುತ್ತಮುತ್ತ ಓಡಾಡುತ್ತ ಪೋಷಕರೊಡನೆ ಮಾತುಕತೆಯಾಡುತ್ತಾ, ಅವರ ತೊಂದರೆಗಳನ್ನು ಅರಿಯಲು ಪ್ರಯತ್ನಿಸುತ್ತಾರೆ. ಎಲ್ಲ ಮಕ್ಕಳ ಶಾಲಾ ಹಾಜರಾತಿಯನ್ನೂ ಗಮನಿಸುವ ಮೂರ್ತಿಯವರು, ಸತತವಾಗಿ ಮೂರು ದಿನಕ್ಕಿಂತ ಹೆಚ್ಚು ಗೈರುಹಾಜರಾದ ಮಕ್ಕಳ ಬಗ್ಗೆ ತಮ್ಮ ಭೇಟಿಗಳಲ್ಲಿ ವಿಚಾರಿಸುತ್ತಾರೆ. ಮಕ್ಕಳ ಓದಿನ ಬಗ್ಗೆ ಅಪ್ಪಅಮ್ಮಂದಿರಿಗೆ ಮೂರ್ತಿಯವರು ತಿಳಿಸುತ್ತಾರೆ. ಸಮುದಾಯ ಮತ್ತು ಪೋಷಕರು ಹಾಗಾಗಿಯೇ ಮೂರ್ತಿಯವರ ಆಸ್ಥೆ ಮತ್ತು ಕೆಲಸಗಳನ್ನು ಮೆಚ್ಚುತ್ತಾರೆ. ‘ಅವರ ಬಗ್ಗೆ ಮತ್ತು ಅವರು ಏನಾಗಿದ್ದರೋ ಅದರ ಬಗ್ಗೆ ನನಗೆ ಆಳವಾದ ಗೌರವವಿದೆ. ಅವರುಗಳು ಬಹಳಷ್ಟು ಸಮಸ್ಯೆಗಳಲ್ಲಿ ಮುಳುಗಿಹೋಗಿದ್ದಾರೆ. ನನ್ನ ಕೈಲಾದಷ್ಟು ನಾನು ಅವರಿಗೆ ಬೆಂಬಲ ನೀಡುತ್ತೇನೆ’ ಎಂದು ಮೂರ್ತಿಯವರು ಹೇಳುತ್ತಾರೆ.

ಅಪ್ಪ ಅಮ್ಮಂದಿರೊಡನೆಯ ಮೂರ್ತಿಯವರ ಸ್ನೇಹ ಒಡನಾಟ, ಮಕ್ಕಳು ಶಾಲೆಗೆ ಸೇರುವ ಮುಂಚಿನಿಂದಲೇ ಮೊದಲಾಗುತ್ತದೆ. ಮುಸ್ಲಿಂ ಸಮುದಾಯದವರ ಮನೆಗಳಿಗೆ ಭೇಟಿ ನೀಡಿ ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಿದ್ದರೆ, ಅವರ ಅಪ್ಪಅಮ್ಮಂದಿರೊಡನೆ ಮಾತನಾಡಿ ಅವರನ್ನು ಶಾಲೆಗೆ ಸೇರಿಸಲು ನಯವಾಗಿ ಒತ್ತಾಯಿಸುತ್ತಾರೆ. ಸ್ವಸಹಾಯ ಗುಂಪುಗಳ ಸಭೆಗಳಿಗೆ ಮತ್ತು ವಾರ್ಡು ಸಭೆಗಳಿಗೆ ಹೋಗಿ ಪೋಷಕರಿಗೆ ಸರ್ಕಾರಿ ಶಾಲೆಗಳಿಂದಾಗುವ ಅನುಕೂಲಗಳನ್ನು ತಿಳಿಸುತ್ತಾರೆ. ಅಪ್ಪ-ಅಮ್ಮಂದಿರನ್ನು ಪ್ರೇರೇಪಿಸಲು ಮತ್ತಿತರ ಶಾಲೆಯ ಬೆಳವಣಿಗೆಯ ಕೆಲಸಗಳಲ್ಲಿ ಶಾಲಾ ಅಭಿವೃದ್ಧಿ ನಿರ್ವಹಣಾ ಸಮಿತಿಯ ಇಬ್ಬರು ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುತ್ತಾರೆ. ಮಕ್ಕಳ ಶಾಲಾ ದಾಖಲಾತಿ ಮತ್ತು ಮುಂದುವರಿಕೆಗೆ ಗಮನ ನೀಡಲು ಶಾಲೆಯ ಅದೇ ಸಮುದಾಯದ ಒಬ್ಬ ಶಿಕ್ಷಕರ ಸಹಾಯವನ್ನೂ ಪಡೆಯುತ್ತಾರೆ.

ಇವಷ್ಟಲ್ಲದೇ, ತಮ್ಮ ಶಾಲೆಯಲ್ಲಿನ ಎಲ್ಲ ಅನುಕೂಲಗಳು ಮತ್ತು ಒಳಿತುಗಳನ್ನೊಳಗೊಂಡ ಚೀಟಿಗಳನ್ನು ಮುದ್ರಿಸಿಟ್ಟಿದ್ದಾರೆ. ಕರ್ನಾಟಕ ಸರ್ಕಾರದಿಂದ ಮಕ್ಕಳಿಗೆ ಸಿಗುವ ಹಣಕಾಸು ಸಹಾಯಗಳ ಪಟ್ಟಿಯನ್ನೂ ಅದು ಒಳಗೊಂಡಿರುತ್ತದೆ. ಹಳ್ಳಿಯಲ್ಲಿನ ಅಪ್ಪಅಮ್ಮಂದಿರಿಗೆ ಇದನ್ನು ಹಂಚುತ್ತಾರೆ. ಸರ್ಕಾರದಿಂದ ದೊರಕುವ ಸವಲತ್ತುಗಳ ಬಗ್ಗೆ ಜನರಿಗೆ ಅರಿವಿಲ್ಲ. ಖಾಸಗೀ ಶಾಲೆಗಳೇ ಉತ್ತಮ ಕಲಿಕೆ ನೀಡುತ್ತವೆಂದು ಅಪ್ಪಅಮ್ಮಂದಿರು ಭಾವಿಸುತ್ತಾರೆ, ಹಾಗಾಗಿ ಇಂತಹ ಕೆಲಸಗಳು ಅಗತ್ಯ. ಶಾಲೆಯ ಆಸುಪಾಸಿನ ಒಂದು ಕಿಲೋ ಮೀಟರಿನಲ್ಲಿ ಐದು ಖಾಸಗೀ ಶಾಲೆಗಳಿವೆ, ಹಾಗಾಗೀ ಇಂತಹ ಚೀಟಿಗಳು ಅಪ್ಪಅಮ್ಮಂದಿರು ಶಾಲೆಗೆ ಬಂದು ನೋಡಲು ಪ್ರೇರಣೆ ನೀಡಬಹುದು.

ಮಕ್ಕಳ ಬಗ್ಗೆ ಕಾಳಜಿ, ಕಳಕಳಿ:

ಅಕ್ಕರೆ ತೋರುವುದೆನ್ನುವುದಕ್ಕೆ ಅನೇಕ ಬಾರಿ ನಿರ್ದಿಷ್ಟ ಸ್ಪಷ್ಟತೆ ಇರುವುದಿಲ್ಲ. ಆದರೆ ಶಾಲೆಯ ಸಂದರ್ಭದಲ್ಲಿ, ಮೇಲಾಗಿ ಅನುಕೂಲ ವಂಚಿತ ಮಕ್ಕಳಿರುವ ಶಾಲೆಗಳಲ್ಲಿ, ಅಕ್ಕರೆ ಎಂಬುದು ವಿಶೇಷ ಅರ್ಥವನ್ನೇ ಪಡೆಯುತ್ತದೆ. ಮೊತ್ತ ಮೊದಲು, ವಿದ್ಯಾರ್ಥಿಗಳೆಲ್ಲರೂ ಅನನ್ಯ ವ್ಯಕ್ತಿಗಳು ಎಂದು ಗೌರವಿಸುವುದು ಮತ್ತು ಎಲ್ಲರೂ ಕಲಿಯಬಲ್ಲರು ಎಂದು ಆಳವಾಗಿ ನಂಬುವುದೇ ಅಕ್ಕರೆ. ಶಿಕ್ಷಕರು ಮತ್ತು ಮಕ್ಕಳು, ಈರ್ವರನ್ನೂ ಪ್ರಭಾವಿಸುವ ಗುರು-ಶಿಷ್ಯ ಸಂಬಂಧಗಳ ಬೆಳವಣಿಗೆಯಲ್ಲಿ ಈ ಕಾಳಜಿ ಕಾಣಿಸಿಕೊಳ್ಳುತ್ತದೆ. ಇದು ಶಾಲೆಯ ಸಂಸ್ಕೃತಿ ಮತ್ತು ಸಾಮುದಾಯಿಕ ಭಾವವನ್ನು ಕಟ್ಟುತ್ತದೆ. ಚಿಕ್ಕಮಂಡ್ಯದ ಸ.ಹಿ.ಪ್ರಾ. ಶಾಲೆಯಲ್ಲಿ ಕಾಳಜಿ ಎಂಬುದು ಬೇರೆ ಬೇರೆ ಆಯಾಮಗಳನ್ನು ಪಡೆಯುತ್ತದೆ. ಮೂರ್ತಿಯವರೊಡನೆಯ ನನ್ನ ಸಂವಾದದಲ್ಲಿ ಪದೇ ಪದೇ ಅವರು ಮಕ್ಕಳ ರಕ್ಷಣೆ ಎಂಬ ಪದೋಕ್ತಿ ಉಪಯೋಗಿಸಿದರು. ಮಕ್ಕಳು ಶಾಲೆಗೆ ಬರುವಂತೆ ಮಾಡುವುದರಲ್ಲಿರುವ ಕಷ್ಟವನ್ನು ಗಮನಿಸಿದಾಗ, ಮಕ್ಕಳಿಗೆ ದೈಹಿಕ ಆಥವಾ ಮಾನಸಿಕ ಹಾನಿಯಾಗದಂತೆ ನೋಡಿಕೊಳ್ಳುವುದರ ಪ್ರಾಮುಖ್ಯತೆ ಅರ್ಥವಾಗುತ್ತದೆ. ಮಕ್ಕಳು ತಮ್ಮ ಮನೆಗೆ ದೊಡ್ಡವರೊಡನೆ ಅಥವಾ ಓರಗೆಯವರೊಡನೆ ಸುರಕ್ಷಿತವಾಗಿ ಹೊರಡುವುದನ್ನು ಮೂರ್ತಿಯವರು ತಾವೇ ಗಮನಿಸುತ್ತಾರೆ. ಹಿಂದೂ ಮತ್ತು ಮುಸ್ಲಿಂ ಮಕ್ಕಳಿಂದ ಕೂಡಿದ ಶಾಲೆಯ ಸಂರಚನೆಗೆ ತಕ್ಕನಾಗಿ ಮೂರ್ತಿಯವರು ಮಕ್ಕಳು ಪರಸ್ಪರರ ಸಂಸ್ಕೃತಿ ಯನ್ನು ಗೌರವಿಸುವಂತೆ ಮತ್ತು ಅವರಲ್ಲಿ ಮೇಲುಕೀಳೆಂದು ಭಾವನೆ ಬರದಂತೆ ನೋಡಿಕೊಳ್ಳುತ್ತಾರೆ. ‘ಮಕ್ಕಳು ಪರರ ಸಂಸ್ಕೃತಿಯನ್ನು ತಿಳಿಯಬೇಕು, ಗೌರವಿಸಬೇಕು ಮತ್ತು ಕಳಕಳಿ ತೋರಬೇಕು’ಎಂದು ಮೂರ್ತಿಯವರು ಹೇಳುತ್ತಾರೆ. ವಿವಿಧತೆಯು ಮೂರ್ತಿಯವರಿಗೆ ಕಲಿಕೆಗೆ ಒಂದು ಮುಖ್ಯ ಸಂಪನ್ಮೂಲ, ತೊಡಕಲ್ಲ.

ಮಕ್ಕಳ ಅಗತ್ಯಗಳು ಮತ್ತು ಸಮಸ್ಯೆಗಳಿಗೆ ಮೂರ್ತಿಯವರು ಎಲ್ಲ ಸಮಯದಲ್ಲೂ ಕಣ್ಣಾಗಿರುತ್ತಾರೆ. ಉದಾಹರಣೆಗೆ, ಒಂದು ಮಗುವು ಶೈಕ್ಷಣಿಕವಾಗಿ ಹಿಂದಿದೆಯೆಂದೂ ಹಾಗೂ ಬರವಣಿಗೆ ಮತ್ತು ಓದಿನಲ್ಲಿ ಮಗು ಕಷ್ಟಪಡುತ್ತದೆಂದೂ ಶಿಕ್ಷಕರು ಹೇಳಿದ್ದರು. ಹೆಚ್ಚುವರಿ ತರಗತಿಗಳಲ್ಲಿ ಮೂರ್ತಿಯವರು ಮಗುವನ್ನು ಗಮನಿಸಿದಾಗ ಮಗುವಿಗೆ ಕಣ್ಣಿನ ಶಕ್ತಿ ಕಡಿಮೆ ಇದೆ ಎಂದು ತಿಳಿಯಿತು ನಂತರದಲ್ಲಿ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಸೂಚಿಸಿದರು. ಪೋಷಕರನ್ನು ಈ ಶಸ್ತ್ರಚಿಕಿತ್ಸೆಗೆ ಒಪ್ಪಿಸುವ ಜವಾಬ್ದಾರಿ ಹೊತ್ತದ್ದು ಬಹಳ ದೊಡ್ಡ ಸಾಹಸವೇ ಎಂದು ಮೂರ್ತಿಯವರು ನೆನಪಿಸಿಕೊಳ್ಳುತ್ತಾರೆ. ಆ ಮಗುವು ಈಗ 4ನೇ ತರಗತಿಯಲ್ಲಿದ್ದು, ಉತ್ತಮ ಪ್ರಗತಿಯನ್ನು ತೋರುತ್ತಿದೆ. ವಿದ್ಯಾರ್ಥಿಗಳ ಆರೋಗ್ಯ ಉತ್ತಮವಾಗಿರುವಂತೆ ನೋಡಿಕೊಳ್ಳುವುದೂ ಮೂರ್ತಿಯವರ ಕೆಲಸದ ಒಂದು ಮುಖ್ಯ ಆಯಾಮ. ಆರೋಗ್ಯ ಮತ್ತು ಕಣ್ಣಿನ ತಪಾಸಣೆಯನ್ನು ಆಗಾಗ್ಗೆ ನಡೆಸುತ್ತಿರುತ್ತಾರೆ. ಸುಮಾರು 25-30 ಮಕ್ಕಳಿಗೆ ಉಚಿತ ಕನ್ನಡಕಗಳನ್ನು ದೊರಕಿಸಿಕೊಟ್ಟಿದ್ದಾರೆ. ಶಾಲೆಯಲ್ಲಿ 16 ವಿಶೇಷ ಅಗತ್ಯಗಳುಳ್ಳ ಮಕ್ಕಳಿದ್ದು, ಅವರು ವರ್ಷಕ್ಕೊಮ್ಮೆ ತಪಾಸಣೆಗೊಳಪಡುತ್ತಾರೆ. ಅವರೊಡನೆ ಮೂರ್ತಿಯವರು ಒಬ್ಬ ಶಿಕ್ಷಕರನ್ನು ಅಗತ್ಯ ನೆರವಿಗಾಗಿ ಕಳುಹಿಸುತ್ತಾರೆ. ಎಲ್ಲದರ ಮೂಲ ಸಾರಾಂಶವೆಂದರೆ, ಮೂರ್ತಿಯವರು ಆಳದಲ್ಲಿ ಮಕ್ಕಳ ಶಿಕ್ಷಣದ ಹಕ್ಕಿನ ಬಗ್ಗೆ ಕಾಳಜಿ ಹೊಂದಿದ್ದು, ಅವರ ಎಲ್ಲ ಕೆಲಸಗಳನ್ನೂ ಮತ್ತು ಅಭ್ಯಾಸಗಳನ್ನೂ ಇದು ನಿರ್ದೇಶಿಸುತ್ತದೆ.

ಪಠ್ಯ, ಸಹ-ಪಠ್ಯ ಎರಡರ ಬಗೆಗೂ ಸಮಾನ ಒತ್ತು ನೀಡುವುದು:

ಮೂರ್ತಿಯವರು ಮುಖ್ಯಶಿಕ್ಷಕರಾಗಿ ಶೈಕ್ಷಣಿಕ ಬೆಳವಣಿಗೆ ಮತ್ತು ತರಗತಿಯೊಳಗಿನ ಪಾಠದ ಗುಣಮಟ್ಟದ ಬಗ್ಗೆ ಸ್ಪಷ್ಟ ಕಾಣ್ಕೆಯನ್ನು ಹೊಂದಿದ್ದಾರೆ. ಮಕ್ಕಳು ಅಗಾಧ ಸಾಮರ್ಥ್ಯ ಹೊಂದಿದ್ದು ಪಠ್ಯದ ಆಭ್ಯಾಸದ ಜೊತೆಜೊತೆಗೇ ಸಹ-ಪಠ್ಯವೂ ಸರಿಹೊಂದಬೇಕು. ಹಾಗಾಗಿ, ಅವರ ಶಾಲೆಯ ಶಿಕ್ಷಕರು ಎರಡರ ಮೇಲೂ ಸೂಕ್ತ ಗಮನ ನೀಡುತ್ತಾರೆ. ಮಕ್ಕಳು ನವೋದಯ, ಮೊರಾರ್ಜಿ ಮತ್ತು ರಾಣಿ ಚೆನ್ನಮ್ಮ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ಸೂಕ್ತ ತಯಾರಿ ನಡೆಸುವ ಬಗ್ಗೆ ಮೂರ್ತಿಯವರು ಬಹಳಷ್ಟು ಶ್ರಮ ವಹಿಸಿದ್ದಾರೆ. ಆಸಕ್ತ ಮಕ್ಕಳನ್ನು ಈ ಪರೀಕ್ಷೆಗಳಿಗೆ ಶಾಲಾ ಸಮಯದ ನಂತರ ಸರತಿಯಂತೆ ತಯಾರು ಮಾಡಲು ಶಿಕ್ಷಕರಿಗೆ ಒಂದು ವೇಳಾಪಟ್ಟಿಯನ್ನು ತಯಾರಿಸಿದ್ದಾರೆ. ಈ ಮಕ್ಕಳೆಡೆಗೆ ಶಿಕ್ಷಕರು ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಾರೆ ಮತ್ತದನ್ನು ಪೋಷಕರು ಮೆಚ್ಚುವುದಷ್ಟೇ ಅಲ್ಲದೇ ಶಾಲೆಯ ಇಂತಹ ಕೆಲಸಗಳಿಂದ ಹೆಚ್ಚು ಪ್ರೇರೇಪಿತರಾಗುತ್ತಾರೆ. ಸಾಮಾನ್ಯವಾಗಿ ಗ್ರಾಮೀಣ ಭಾಗಗಳಿಂದ ತುಸುವೇ ಮಕ್ಕಳು ಈ ಪರೀಕ್ಷೆಗಳಲ್ಲಿ ಅರ್ಹತೆಗಳಿಸುತ್ತಾರೆ. ಆದರೆ, ಮೂರ್ತಿಯವರ ಶಾಲೆಯ ಐದು ವಿದ್ಯಾರ್ಥಿಗಳು ಇತ್ತೀಚೆಗೆ ನವೋದಯ ಶಾಲೆಗಳಿಗೆ ಸೇರಿದ್ದಾರೆ. ಶೈಕ್ಷಣಿಕ ಬೆಳವಣಿಗೆಗಳೊಂದಿಗೇ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮಕ್ಕಳನ್ನು ಮೂರ್ತಿಯವರು ಉತ್ತೇಜಿಸುತ್ತಾರೆ. ಚಿಕ್ಕಮಂಡ್ಯದ ಸ.ಹಿ.ಪ್ರಾ. ಶಾಲೆ ಕವ್ವಾಲಿ ಮತ್ತು ಭಾವಗೀತೆ ಸ್ಪರ್ಧೆಗಳಲ್ಲಿ ಮೊದಲ ಬಹುಮಾನ ಗಳಿಸಿದೆ. ನಮ್ಮ ಮುಂದೆ ಈ ಮಕ್ಕಳಿಗೆ ಹಾಡಲು ಮೂರ್ತಿಯವರು ಹೇಳಿದಾಗ, ಮಧುರವಾಗಿ ಮತ್ತು ಧೈರ್ಯದಿಂದ ಮಕ್ಕಳು ನಮ್ಮ ಮುಂದೆ ಹಾಡಿದರು. ಸತತವಾಗಿ ನಾಲ್ಕನೆಯ ವರ್ಷವೂ ಅವರ ಶಾಲೆ ಜೇಡಿಮಣ್ಣಿನ ಮಾದರಿಗಳನ್ನು ಮಾಡುವುದರಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಶಿಕ್ಷಕರು ಮಕ್ಕಳಲ್ಲಿ ಸ್ಥೈರ್ಯ ಮತ್ತು ಕೌಶಲಗಳನ್ನು ಈ ಸಹ-ಪಠ್ಯ ಚಟುವಟಿಕೆಗಳ ಮೂಲಕ ಬೆಳಸಲು ಬಹಳಷ್ಟು ಶ್ರಮವಹಿಸುತ್ತಾರೆ ಎಂಬುದನ್ನು ಮೂರ್ತಿಯವರು ಒತ್ತಿ ಹೇಳಿದರು, ‘ನಾವು ಮಕ್ಕಳನ್ನು ಯಾವುದೇ ರೀತಿಯ ಅವಕಾಶಗಳಿಂದ ವಂಚಿತರನ್ನಾಗಿಸಬಾರದು. ಮಕ್ಕಳ ಬೆಳವಣಿಗೆ ಇವೆಲ್ಲದರ ಮೂಲಕ ಆಗುವಂತೆ ಮಾಡುವುದು ಅತ್ಯಗತ್ಯ’

ಮಕ್ಕಳ ಶಿಕ್ಷಣ ಹಕ್ಕಿನ ರಕ್ಷಣೆ:

ಶಿಕ್ಷಣದ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗುಳಿದಿರುವ ಅಸಂಖ್ಯಾತ ಮಕ್ಕಳಿದ್ದಾರೆ. ಅವರ ಶಿಕ್ಷಣದ ಹಕ್ಕನ್ನು ಪ್ರತಿಪಾದಿಸುತ್ತಾ ಅವಕಾಶವಂಚಿತ ಸಮುದಾಯಗಳ ಮಕ್ಕಳು ಶಿಕ್ಷಣದಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಂತೆ ಮಾಡುವುದು ಅಡೆತಡೆಗಳಿಲ್ಲದ್ದೇನಲ್ಲ. ಮಕ್ಕಳ ಶಿಕ್ಷಣ ಹಕ್ಕಿನ ರಕ್ಷಣೆಯ ಬಗ್ಗೆ ಮೂರ್ತಿಯವರಿಗಿರುವ ಬಲವಾದ ನಂಬಿಕೆ, ಮಕ್ಕಳನ್ನು ಪುನಃ ಶಾಲೆಗೆ ಬರುವಂತೆ ಮಾಡುವಲ್ಲಿ ಅವರು ಹೆಚ್ಚು ತೊಡಗಿಕೊಳ್ಳುವಂತೆ ಮಾಡಿದೆ. ಜಿಲ್ಲಾ ಮಕ್ಕಳ ಹಕ್ಕು ಸಮಿತಿಯ ಸದಸ್ಯರೂ ಆಗಿರುವ ಮೂರ್ತಿಯವರು, ಆ ಸಮಿತಿಯ ಮೂಲಕ, ಬೀದಿಯಲ್ಲಿರುವ, ನಿರ್ಗತಿಕರಾದ ಮಕ್ಕಳಿಗೆ ಮತ್ತು ಬಾಲ ಕಾರ್ಮಿಕರಾಗಿರುವ ಮಕ್ಕಳಿಗೆ ನೆರವು ನೀಡಿ, ಅವರಿಗೆ ಇರಲು ಸುರಕ್ಷಿತ ಸ್ಥಳಗಳನ್ನು ದೊರಕಿಸಿಕೊಟ್ಟು, ಶಾಲೆಗೂ ಸೇರುವಂತೆ ಮಾಡಿದ್ದಾರೆ. ಇಂತಹ ಮಕ್ಕಳನ್ನು ಕಂಡರೆ ತಕ್ಷಣವೇ ಪೋಲೀಸರಿಗೆ ವಿಷಯ ಮುಟ್ಟಿಸುವ ಮೂರ್ತಿಯವರು, ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಹಿರಿಯರ ಮಾರ್ಗದರ್ಶನ, ಮೇಲುಸ್ತುವಾರಿ ಮತ್ತು ಕಾಳಜಿ ಇರದಿದ್ದಾಗ, ಇಂತಹ ಚಟುವಟಿಕೆಗಳಿಗೆ ತಳ್ಳಲ್ಪಡುತ್ತಾರೆ ಎಂದೂ ಬಲವಾಗಿ ನಂಬಿದ್ದಾರೆ. ಬಹಳಷ್ಟು ಬಾರಿ ಅವರಿಗೆ ಮಂಡ್ಯದ ದೂರದ ಗ್ರಾಮಗಳಲ್ಲಿ ಆಗಷ್ಟೇ ಹುಟ್ಟಿದ ಮಾತೆಯರು ತೊರೆದ ಹಸುಳೆಗಳ ಬಗ್ಗೆ ವಿಷಯ ತಲುಪಿ, ತಕ್ಷಣವೇ ಅವರು ಕಾರ್ಯಪ್ರವೃತ್ತರಾಗಿ, ಆ ಮಕ್ಕಳನ್ನು ರಕ್ಷಿಸಿ, ಬಾಲಮಂದಿರಕ್ಕೆ ಸೇರಿಸಿ ಆ ಮಕ್ಕಳ ರಕ್ಷಣೆಯನ್ನು ಗಮನಿಸಿದ್ದೂ ಇದೆ.

ಮದುವೆ ವಯಸ್ಸು ತಲುಪದ ಮಕ್ಕಳನ್ನು ಮದುವೆ ಮಾಡಿ ಸಾಗಹಾಕುವ ವಿಷಯದ ಬಗ್ಗೆ ಇವರು ಸತತವಾಗಿ ಕಣ್ಣಿಟ್ಟಿರುತ್ತಾರೆ. ಈ ಅಭ್ಯಾಸವು ಕಡಿಮೆಯಾಗಿದ್ದರೂ, ಅಲ್ಲಲ್ಲಿ ಬಾಲ್ಯ ವಿವಾಹ ಇನ್ನೂ ಇದೆ. ಒಮ್ಮೆ, ಒಂದು ಹಳ್ಳಿಯಲ್ಲಿ ಅವರು ಐದು ಮಕ್ಕಳನ್ನು ಮದುವೆಯಿಂದ ಕಾಪಾಡಿದ್ದರು. ಅವರ ಶಾಲೆಯಲ್ಲೇ ಅವರು ಹಲವು ಬಾಲ್ಯ ವಿವಾಹಗಳನ್ನು ತಡೆದಿದ್ದಾರೆ. ಅವರ ಪ್ರಕಾರ, ಮದುವೆಗೆ ಸಿಲುಕಬೇಕಾದ ಮಗುವಿನ ಓರಗೆಯವರೇ ಮದುವೆಯ ವಿಷಯದ ವಾಹಕರು. ಅಂತಹ ಮಕ್ಕಳ ಪಾಲಕರೊಡನೆಯ ಸಂವಾದದಲ್ಲಿ, ಅವರ ಮಗುವಿನ ಭವಿಷ್ಯಕ್ಕೆ ಶಿಕ್ಷಣದ ಮಹತ್ವವನ್ನು ತಿಳಿಹೇಳಿ ಒಪ್ಪಿಸುತ್ತಾರೆ. ಯಾವುದೇ ಹಿರಿಯ ಅಧಿಕಾರಿಗೆ ವಿಷಯ ತಿಳಿದು ತನಿಖೆ ನಡೆದರೆ, ಶಾಲೆಗೂ, ಊರಿಗೂ ಅಷ್ಟೇ ಅಲ್ಲ ಅಪ್ಪಅಮ್ಮಂದಿರುಗೂ ಕೆಟ್ಟ ಹೆಸರು ಬರುತ್ತದೆಂದು ಮಕ್ಕಳಿಗೆ ತಿಳಿಹೇಳುತ್ತಾರೆ. ಕೆಲವೊಮ್ಮೆ ಮಕ್ಕಳು ಮದುವೆಯ ಮಾತುಕತೆ ನಡೆಯುತ್ತಿರುವುದನ್ನು ಅಲ್ಲಗಳೆದರೂ ಸ್ವಲ್ಪ ಕೆದಕಿದರೂ (ನಿನ್ನ ನಿಶ್ಚಿತಾರ್ಥವಂತೆ ನಿಜವೇ? ಇತ್ಯಾದಿ.) ಅವರು ನಿಜ ಹೊರಗೆಡಹುತ್ತಾರೆ. ಪಾಲಕರೇನಾದರೂ ಮಗುವಿನ ವಯಸ್ಸಿನ ಪ್ರಮಾಣಪತ್ರವನ್ನು ಶಾಲೆಯಿಂದ ಕೇಳಿದರೆ, ಆ ಮಗುವನ್ನು ಮದುವೆ ಮಾಡಿ ಕಳುಹಿಸುವ ಇರಾದೆ ಪಾಲಕರಿಗಿದೆ ಎಂಬ ಸೂಚನೆ ದೊರಕುತ್ತದೆ. ತಕ್ಷಣವೇ ಶಾಲೆಯು ಈ ವಿಷಯದಲ್ಲಿ ಕಾರ್ಯಪ್ರವೃತ್ತವಾಗುತ್ತದೆ ಮತ್ತು ಬಾಲ್ಯವಿವಾಹ ತಡೆಯಲು ಪಾಲಕರಿಗೆ ಮತ್ತು ಮಗುವಿಗೆ ತಿಳಿಹೇಳುತ್ತದೆ.

ಬಾಲ್ಯವಿವಾಹ ಸಮಸ್ಯೆಯೊಡನೆ, ಬಾಲ ಕಾರ್ಮಿಕ ಸಮಸ್ಯೆಯೂ ಬಹಳ ಇದೆ. ಮಕ್ಕಳು ಗ್ಯಾರೇಜ್‍ನಲ್ಲಿ, ಬೀಡಿ ಸುತ್ತಲು ಮತ್ತು ರಸ್ತೆ ಬದಿಯ ಹೋಟೆಲ್ ಗಳಲ್ಲಿ ಕೆಲಸ ಮಾಡುವುದನ್ನು ಕಂಡಿದ್ದಾರೆ. ಪೋಷಕರಲ್ಲಿ ಶಿಕ್ಷಣದ ಪ್ರಾಮುಖ್ಯತೆಯ ಅರಿವಿಲ್ಲದಿರುವುದೇ ಸಮಸ್ಯೆಯ ಮೂಲ ಎಂದು ಮೂರ್ತಿಯವರ ಅನಿಸಿಕೆ. ಮಕ್ಕಳು ಅಜ್ಜಿತಾತಂದಿರನ್ನೋ ಇಲ್ಲ ಒಡಹುಟ್ಟಿದವರನ್ನೋ ಮನೆಯಲ್ಲಿ ಆರೈಕೆ ಮಾಡುತ್ತಾ, ಇಲ್ಲವೇ ಮನೆಯ ಒಳಗಿನ ಅಥವಾ ಹೊರಗಿನ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಬಿಡುವಾದರೆ ಶಾಲೆಗೆ ಹೋಗುವುದನ್ನು ಅವರು ಆಶಿಸುತ್ತಾರೆ.

ಮೂರ್ತಿಯವರು ಬೇರೆ ಬೇರೆ ವೇದಿಕೆಗಳಲ್ಲಿ, ಬಾಲ್ಯವಿವಾಹವು ಮಗುವಿನ ಶಿಕ್ಷಣವನ್ನು ಕಿತ್ತುಕೊಂಡು, ಮಗುವಿನ ಭವಿಷ್ಯತ್ತಿನ ಬಲಿ ತೆಗೆದುಕೊಳ್ಳುತ್ತದೆಂದು ಸಮುದಾಯದವರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಾರೆ. ವಿವಿಧ ವೇದಿಕೆಗಳಲ್ಲಿ, ಕ್ಯಾಂಪುಗಳಲ್ಲಿ, ಸರ್ಕಾರೇತರ ಸಂಘ ಸಂಸ್ಥೆಗಳೊಡನೆ ನಡೆಯುವ ಅರಿವಿನ ಕಾರ್ಯಕ್ರಮಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ಮಕ್ಕಳ ಶಿಕ್ಷಣ ಹಕ್ಕಿನ ರಕ್ಷಣೆಯ ಬಗ್ಗೆ ಮಾತನಾಡುತ್ತಾರೆ. ಮಕ್ಕಳುಗಳಲ್ಲೇ ಇದರ ಅರಿವು ಮೂಡಿಸಲು ಪ್ರಯತ್ನಿಸುತ್ತಾರೆ. ಅವರ ಶಾಲೆಯ ಮಕ್ಕಳಿಗೆ ಮಕ್ಕಳ ಸಹಾಯ ದೂರವಾಣಿ ಸಂಖ್ಯೆ 1098ರ ಬಗ್ಗೆ ತಿಳಿದಿದೆ. ಮಕ್ಕಳಿಗೆ ನ್ಯಾಯ ದೊರಕಬೇಕೆಂದು ಗಾಢವಾಗಿ ಅವರು ನಂಬುತ್ತಾರೆ. ಅವರಿಗೆ ದೇವರಲ್ಲಿ, ಸರ್ಕಾರೀ ವ್ಯವಸ್ಥೆಯಲ್ಲಿ ಮತ್ತು ಕಾನೂನಿನ ಮೇಲೆ ನಂಬಿಕೆ ಇದೆಯೆಂದು ಅವರು ಹೇಳುತ್ತಾರೆ. ಅವರ ದಿನವಹಿ ಕೆಲಸಗಳು ಹೆಚ್ಚಾಗಿ ಮಕ್ಕಳಿಗೆ ಶಿಕ್ಷಣ ದೊರಕುವಂತೆ ನೋಡಿಕೊಳ್ಳುವುದಕ್ಕೆ ಸಂಬಂಧಪಟ್ಟಿದ್ದರೆ, ಭಾನುವಾರಗಳಂದು ಮಕ್ಕಳ ಹಕ್ಕು ಸಮಿತಿಯ ಕೆಲಸಗಳನ್ನು ಮಾಡುತ್ತಾರೆ. ಈ ಮುಖ್ಯ ಶಿಕ್ಷಕರ, ವೈಯಕ್ತಿಕ ಬದುಕಿಗೆ ಮತ್ತು ವೃತ್ತಿ ಬದುಕಿಗೆ ನಡುವೆ ಗೆರೆಯೇ ಇಲ್ಲ. ಬೇರೆ ಬೇರೆ ಸಮಯ ಹೊಂದಿಸಲು ಅವಕಾಶವೇ ಇಲ್ಲ.

ಕೂಡುಕೆಲಸ:

ಶಾಲೆಯ ಈ ಯಶಸ್ಸಿಗೆ ಮೂರ್ತಿಯವರು ನೀಡುವ ಕಾರಣ ತಮ್ಮ ಶಾಲೆಯ ಎಲ್ಲ ಸಿಬ್ಬಂದಿಯ ನಡುವಿನ ಹೊಂದಾಣಿಕೆ ಮತ್ತು ಪರಸ್ಪರ ಕೈಜೋಡಿಸುವಿಕೆ. ತಮ್ಮ ಶಾಲೆಯ 10 ಸಹೋದ್ಯೋಗಿಗಳ ಬಗ್ಗೆ ಮೂರ್ತಿಯವರಿಗೆ ಬಹಳ ಹೆಮ್ಮೆ ಇದೆ. ಕೆಲವರು ಟಿ.ಸಿ.ಎಚ್ ಮತ್ತು ಬಿ.ಎಡ್. ಹೊಂದಿದ್ದರೆ, ಕೆಲವರು ಸ್ನಾತಕೋತ್ತರ ಪದವೀಧರರೂ ಇದ್ದಾರೆ. ಎಲ್ಲರೊಡನೆಯ ನಮ್ಮ ಸಂವಾದದಲ್ಲಿ ನಮಗೆ ಎದ್ದು ಕಂಡಿದ್ದು, ಅವರ ನಡುವಿನ ಸಹಕಾರ ಮನೋಭಾವ. ಎಲ್ಲ ಶಿಕ್ಷಕರೂ ತಮ್ಮ ಶಾಲೆಯ ಬಗ್ಗೆ ಬಹಳ ಹೆಮ್ಮೆಯಿಂದ ಮಾತನಾಡಿದರು. ಶಾಲೆಗೆ ಮಕ್ಕಳನ್ನು ಸೇರಿಸುವಲ್ಲಿ ಮೂರ್ತಿಯವರ ಅಸಾಧಾರಣ ಪರಿಶ್ರಮವನ್ನು ಎಲ್ಲ ಶಿಕ್ಷಕರೂ ಬಣ್ಣಿಸುತ್ತಾರೆ. ವೃತ್ತಿ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳಲ್ಲಿ ಎಲ್ಲ ಶಿಕ್ಷಕರೂ ನಿಯತವಾಗಿ ಭಾಗವಹಿಸುತ್ತಾರೆ ಮತ್ತು ಮೂರ್ತಿಯವರು ಮುಂದೆ ಓದಲು ಎಲ್ಲರನ್ನೂ ಪ್ರೋತ್ಸಾಹಿಸುತ್ತಾರೆ. ಸಮಯಪಾಲನೆ, ಪಾರದರ್ಶಕತೆ, ಹೊಂದಾಣಿಕೆ ಮತ್ತು ಜವಾಬ್ದಾರಿಗಳನ್ನು ಅವರೊಡನೆ ಹಂಚಿಕೊಳ್ಳುವುದು ಇವೆಲ್ಲವನ್ನು ಮೂರ್ತಿಯವರು ತಾವೇ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಅವರೊಡನೆಯ ಮಾತುಕತೆಯಲ್ಲಿ, ಶಿಕ್ಷಕರು ಮೂರ್ತಿಯವರ ಕೃತಿಗಳು ಮತ್ತು ಚರ್ಯೆಗಳಿಂದಾಗಿ ತಾವು ಹೇಗೆ ಇದೇ ಶಾಲೆಯಲ್ಲಿ ಮುಂದುವರೆಯುವ ಹುರುಪು ಪಡೆದಿದ್ದೇವೆ ಎಂದೂ ತಿಳಿಸಿದರು. ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರೊಡನೆಯೂ ಮೂರ್ತಿಯವರು ಸ್ನೇಹಮಯ ಸಂಬಂಧವನ್ನು ಹೊಂದಿದ್ದಾರೆ. ಶಾಲಾ ಅಭಿವೃದ್ಧಿಗೆ ಅವರು ಬಲು ಮುಖ್ಯ ಭಾಗೀದಾರರು ಎಂದೇ ತಿಳಿದಿರುವ ಮೂರ್ತಿಯವರು, ಸಂತೋಷದಿಂದ ಅವರ ನೆರವನ್ನು ಪಡೆಯುತ್ತಾರೆ. ಶಾಲೆಯ ಮೂಲಭೂತ ಸೌಕರ್ಯಗಳ ಬೆಳವಣಿಗೆಯಲ್ಲಿ ಸಮುದಾಯದ ಹಲವು ಸದಸ್ಯರ ಪಾಲ್ಗೊಳ್ಳುವಿಕೆಯನ್ನು ಮೂರ್ತಿಯವರು ತೋರಿಸಿದ ಚಿತ್ರಪಟಗಳಲ್ಲಿ ಕಾಣಬಹುದು.

ಶಾಲೆಯ ಬಗೆಗಿನ ಮೂರ್ತಿಯವರ ಕನಸಿನ ಬಗ್ಗೆ ಕೇಳಿದಾಗ, ತಮ್ಮ ವಿಚಾರಮಗ್ನ ಮುಗುಳ್ನಗೆಯೊಂದಿಗೆ ‘ಈ ಶಾಲೆಯನ್ನೊಂದು ಮಾದರಿ ಶಾಲೆಯನ್ನಾಗಿಸುವುದು’ ಎಂದರು. ತಮ್ಮ ಶಾಲೆ ಇತರ ಶಾಲೆಗಳಿಗೆ ಒಳ್ಳೆಯ ಅಭ್ಯಾಸಗಳನ್ನು ತೋರಿಸಿಕೊಡಬೇಕೆಂದು ಆಶಿಸುತ್ತಾರೆ. ತಂತ್ರಜ್ಞಾನವನ್ನು ಶಾಲೆಗೆ ತಂದು ಮಕ್ಕಳಿಗೆ ವಿಡಿಯೋ ಮುಂತಾದವನ್ನು ತೋರಿಸುವ ಆಸೆ ಇವರದು. ಎಡ್ಯುಸ್ಯಾಟನ್ನು ಶಾಲೆಗೆ ತರುವ ಆಸೆಯನ್ನೂ ಹೊಂದಿದ್ದಾರೆ. ಯಾವುದೇ ಭೇದಭಾವವಿಲ್ಲದೇ ಮಕ್ಕಳೆಲ್ಲರಿಗೂ ಒಳ್ಳೆಯ ಶಿಕ್ಷಣ ದೊರಕುವಂತೆ ಮಾಡಬೇಕೆಂದಿದ್ದಾರೆ ಮೂರ್ತಿಯವರು. ಆತ್ಮ-ಪ್ರಜ್ಞೆಯುಳ್ಳ, ಆತ್ಮ ನಿರೀಕ್ಷಣೆಯ ಮತ್ತು ಅಂತಃಪ್ರೇರಣೆಯ ಈ ಶಿಕ್ಷಕನಿಗೆ, ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವುದೊಂದು ನೈತಿಕ ಕರ್ತವ್ಯ. ‘ತಮ್ಮ ಪೋಷಕರ ಪರಿಸ್ಥಿತಿಗಳಿಂದಾಗಿ ಮಕ್ಕಳು ಕಷ್ಟಗಳಲ್ಲಿ ಸಿಲುಕಿದ್ದಾರೆ, ಆ ಮಕ್ಕಳ ಬಗ್ಗೆ ನಮಗೊಂದು ಜವಾಬ್ದಾರಿಯಿದೆ’ ಎನ್ನುವ ಮಾತಿನಲ್ಲಿ ಅವರೆಲ್ಲ ಚಿಂತನೆಗಳನ್ನು ಹಿಡಿದಿಡುತ್ತಾರೆ. ಶಾಲಾಮಟ್ಟದ ಉತ್ತಮ ನಾಯಕತ್ವ, ಶಿಕ್ಷಣ ವ್ಯವಸ್ಥೆಯನ್ನು ಉತ್ತಮ ಪಡಿಸಲು ಅತ್ಯಗತ್ಯ ಎಂಬುದನ್ನು ಮೂರ್ತಿಯವರ ವೃತ್ತಿ ಕಥನವು ಮತ್ತೊಮ್ಮೆ ಸಾಬೀತು ಪಡಿಸುತ್ತದೆ.

ಕೆಲವು ಒಳನೋಟಗಳು:

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಪರಿವರ್ತನೆಯ ಯೋಜನೆಗಳ ಪ್ರತಿಪಾದನೆಗಳು ಮತ್ತು ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸುವುದು, ಇವುಗಳಿಂದ ಶಿಕ್ಷಣದಲ್ಲಿ ನೇರವಾದ ಗುಣಾತ್ಮಕ ಫಲಿತಾಂಶಗಳು ಅದೂ ಅವಕಾಶವಂಚಿತ ಸಮುದಾಯಗಳ ಮಕ್ಕಳಿಗೆ, ಸುಲಭವಾಗಿ ದಕ್ಕುವುದಿಲ್ಲ, ಸಾಮಾಜಿಕ ಅಸಮತೆಗಳು ಮತ್ತು ಸಾಂಸ್ಕೃತಿಕ ಆಚರಣೆಗಳು ಮಕ್ಕಳು ಶಾಲೆಗೆ ಸೇರುವ ಮತ್ತು ಮುಂದುವರೆಯುವ ಸಾಧ್ಯತೆಗಳ ಮೇಲೆ ಪ್ರಭಾವ ಬೀರುತ್ತವೆ. ಉದಾಹರಣೆಗೆ, ಕೇವಲ ‘ಕೆಲವೇ ಗುಂಪಿನ ಮಕ್ಕಳಿಗೆ ಮಾತ್ರ ಕೆಲಸ ಮತ್ತು ಕಲಿಕೆ’ ಎಂಬುದು ಈ ಮಕ್ಕಳಿಗೆ ಮಾಡುವ ಅವಹೇಳನವಷ್ಟೇ. ಇಂತಹ ವಿಷಮ ಸ್ಥಿತಿಯಲ್ಲಿ, ಮಕ್ಕಳು, ಸಮಾಜದಲ್ಲಿ ಕಡೆಗಣಿತ ರಾಗದಂತಿರಲು, ಶಾಲಾ ವ್ಯವಸ್ಥೆಯಲ್ಲಿನ ಎಲ್ಲರೂ ತಮ್ಮ ತಮ್ಮ ಪರಿಧಿಯಲ್ಲಿ ಮುಂದಾಗಿ ಉತ್ತಮ ಕೆಲಸಗಳನ್ನು ಮಾಡುವುದು ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ಸಂವಿಧಾನದ ಬದ್ಧತೆಯಾದ ಸಮಾನತೆ ಮತ್ತು ನ್ಯಾಯವನ್ನು ಸರ್ಕಾರೀ ಶಾಲೆಯಲ್ಲಿನ ಶಿಕ್ಷಣದ ಪ್ರಕ್ರಿಯೆಯಲ್ಲಿ ಹೇಗೆ ಮಾಡಲಾಗುತ್ತಿದೆ ಎಂಬುದನ್ನು ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ನಂಬಿಕೆಗಳು ಮತ್ತು ಆಚರಣೆಗಳು (ಮಕ್ಕಳು, ಶಾಲೆ, ಶಿಕ್ಷಣ, ಕಲಿಕೆ ಮತ್ತು ಕಲಿಸುವಿಕೆ ಮುಂತಾದವುಗಳ ಬಗ್ಗೆ) ನಿರ್ಧರಿಸುತ್ತವೆ. ಶಾಲೆಯಲ್ಲಿ ಮಕ್ಕಳು ಮುಂದುವರೆಯಲು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷ ಕ್ರೌರ್ಯದಿಂದ ಅವರನ್ನು ಕಾಪಾಡಲು ಶಾಲೆಯಲ್ಲಿ ಮಕ್ಕಳಿಗೆ ಕಾಳಜಿ ತೋರುವವರ ಅಗತ್ಯವಿದೆ. ಎಲ್ಲಾ ಮಕ್ಕಳೂ ಕಲಿಯಬಲ್ಲರು, ಅವರ ಸಾಮಾಜಿಕ- ಭಾವನಾತ್ಮಕ ಅಗತ್ಯಗಳಿಗೆ ಸ್ಪಂದಿಸಬಲ್ಲ, ಗ್ರಹಣ ಶಕ್ತಿ ಮತ್ತು ನೈತಿಕ ಶಕ್ತಿಗಳನ್ನು ಬೆಳೆಸಬಲ್ಲಂತಹ ಮತ್ತು ಶಿಕ್ಷಣದ ವಿಸ್ತೃತ ಗುರಿಗಳ ಜೊತೆ ಹೊಂದುವಂತಹ ಕಾಳಜಿಯ ಅಗತ್ಯ ಮಕ್ಕಳಿಗಿದೆ. ಶಿಕ್ಷಕ ತರಬೇತಿಯ ಕಾಣ್ಕೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಶಾಲಾ ಶಿಕ್ಷಣದ (ಎನ್‍ಸಿಎಫ್, 2005) ಮತ್ತು ಶಿಕ್ಷಕ ಶಿಕ್ಷಣ (2009) ದ ಪಠ್ಯ ಸುಧಾರಣೆಯ ಬರಹಗಳು ‘ಕಾಳಜಿಯ ಪ್ರಾಮುಖ್ಯತೆ’ಯನ್ನು ಒತ್ತಿ ಹೇಳಿವೆ: ‘ಶಿಕ್ಷಕರು ಮಕ್ಕಳೆಡೆಗೆ ಕಾಳಜಿ ತೋರಲು ಸಿದ್ಧರಿರಬೇಕು ಹಾಗೂ ಅವರೊಡನೆ ಇರುವುದನ್ನೇ ಇಷ್ಟಪಡಬೇಕು’ (ಎನ್‍ಸಿಎಫ್, 2005, ಪು:108) ಹಾಗೂ ‘ಶಿಕ್ಷಕರು ಮಕ್ಕಳೆಡೆಗೆ ಕಾಳಜಿ ತೋರಲು ಸಿದ್ಧರಿರಬೇಕು ಹಾಗೂ ಅವರೊಡನೆ ಇರುವುದನ್ನು ಆನಂದಿಸಬೇಕು’ (ಎನ್‍ಸಿಎಫ್‍ಟಿಇ, 2005, ಪು:30). ಈ ಆಶಯಗಳನ್ನು ಸುಧಾರಣೆಯಲ್ಲಿ ಸೇರಿಸಿದ್ದರಿಂದ, ಶಾಲೆ ಮತ್ತು ಮಕ್ಕಳ ಸಂಬಂಧಗಳು ಹೇಗೆ ರೂಪುಗೊಳ್ಳಬೇಕು, ಹೇಗಿರಬೇಕು ಮತ್ತು ಏನಿರಬೇಕು ಎಂಬುದರ ಬಗ್ಗೆ ಸೂಚನೆಯಿದೆ ಎಂದು ತೋರುತ್ತದೆ.

ಶಾಲೆ ಮತ್ತು ಕುಟುಂಬದ ನಡುವಣ ಸಂಪರ್ಕವು, ಶಾಲೆಯಲ್ಲಿ ಮಕ್ಕಳು ಮುಂದುವರೆಯುವಲ್ಲಿ ಮತ್ತು ಅವರ ಕಲಿಕೆಗೆ ಒತ್ತು ನೀಡುವಲ್ಲಿ ಪ್ರಮುಖ ಪಾತ್ರವೆಂದು ಕಂಡು ಬಂದಿದೆ. ಮಕ್ಕಳ ಶಿಕ್ಷಣದ ಬಗೆಗೆ ಅಪ್ಪಅಮ್ಮಂದಿರಿಗಿರುವ ಆಕಾಂಕ್ಷೆಗಳು ಹೆಚ್ಚುತ್ತಿದ್ದರೂ, ಅವರ ಸದ್ಯದ ಪರಿಸ್ಥಿತಿಗಳು, ಮಕ್ಕಳ ಭವಿಷ್ಯತ್ತಿನ ಬಗೆಗಿನ ಆಸೆಗಳನ್ನು ಬಲಗುಂದಿಸುತ್ತಿವೆ. ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಮಾನವೀಯ ನೆಲೆಯಲ್ಲಿ ಅವುಗಳಿಗೆ ಸ್ಪಂದಿಸುವ ಶಿಕ್ಷಕರು ಮತ್ತು ಮುಖ್ಯಶಿಕ್ಷಕರ ಬೆಂಬಲ ಬೇಕಾಗುತ್ತದೆ. ಶಾಲೆಯ ಪರಿಸರದೊಳಗಿನ ಈ ಸವಾಲುಗಳ ನಡುವೆ ಸರ್ಕಾರೀ ಶಾಲೆಯ ಶಿಕ್ಷಕರು ಮತ್ತು ಮುಖ್ಯಶಿಕ್ಷಕರಿಗೆ, ಮಕ್ಕಳ ಅಪ್ಪಅಮ್ಮಂದಿರಿಗೆ ಖಾಸಗೀ ಶಾಲೆಯೆಡೆಗೆ ಹೆಚ್ಚುತ್ತಿರುವ ಒಲವು ಕೂಡ ಮತ್ತೊಂದು ಸವಾಲಾಗುತ್ತಿದೆ. ಹಾಗಾಗಿ, ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಅಪ್ಪಅಮ್ಮಂದಿರಲ್ಲಿ ಆಕರ್ಷಣೆ ಉಂಟುಮಾಡಲು ಕೈಜೋಡಿಸಿ ಕೆಲಸ ಮಾಡಬೇಕಾಗುತ್ತದೆ. ಈ ಹೊಸ ರೀತಿಯ ಸ್ಪರ್ಧೆಯು ಅಪೇಕ್ಷಣೀಯವಲ್ಲದಿದ್ದರೂ, ಅವರ ಕೆಲವು ಅಭ್ಯಾಸಗಳನ್ನು ಅವಲೋಕಿಸಿ, ಅವನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಶಿಕ್ಷಣದ ಗುಣಮಟ್ಟ ಹಾಗೂ ಆ ಮಕ್ಕಳ ಶಿಕ್ಷಣದ ಮುಂದುವರಿಕೆಯ ಬಗೆಗೆ ಹೊಸ ರೀತಿಯ ಕಲ್ಪನೆಗಳನ್ನು ಬೆಳೆಸಿಕೊಳ್ಳಲು ಇದು ಅನುವು ಮಾಡಿಕೊಡುತ್ತಿದೆ.

ಕಠಿಣ ಪರಿಸ್ಥಿತಿಗಳಲ್ಲಿರುವ ಮಕ್ಕಳ ಜೀವನದಲ್ಲಿ ಬದಲಾವಣೆ ತರುವ ಅಗತ್ಯ ಮತ್ತು ಮಕ್ಕಳ ಹಿತದ ಬಗೆಗಿನ ಶಿಕ್ಷಕರು ಮತ್ತು ಮುಖ್ಯಶಿಕ್ಷಕರ ನೈತಿಕ ಹೊಣೆಗಾರಿಕೆ ಇವು ಮಕ್ಕಳು ಶಾಲೆಯಲ್ಲಿ ಪಾಲ್ಗೊಳ್ಳುವಿಕೆಯ ಗುಣಮಟ್ಟದಲ್ಲಿ ಮತ್ತು ಅವರು ಶಿಕ್ಷಣವನ್ನು ಪೂರೈಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ‘ನಾವು ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವುದು ಅತ್ಯಗತ್ಯ. ನಾವು ನಿರ್ವಹಿಸಿದರೆ, ಕೆಲಸದ, ಆರ್ಥಿಕ ಸುಭದ್ರತೆಯ, ಮತ್ತು ಸ್ವಾತಂತ್ರ್ಯದ ಹಾದಿಯನ್ನು ಮಕ್ಕಳಿಗೆ ತೋರುತ್ತೇವೆ. ನಾವು ಸರಿಯಾಗಿ ನಿರ್ವಹಿಸದಿದ್ದರೆ, ಅವರು ಬೀದಿಗೆ ಬೀಳುತ್ತಾರೆ. ಅವರು ಕಲಿಕೆಗೆ ಅಂಟಿಕೊಳ್ಳುವಂತೆ ಮತ್ತು ಯಶಸ್ಸಿನ ಕೌಶಲ್ಯಗಳನ್ನು ಕಲಿಯುವಂತೆ ಉತ್ತೇಜಿಸಿದರೆ, ಅವರಿಗೆ ಬಡತನದ ಕೂಪದಿಂದ ಹೊರಬರುವ ಒಂದು ದಾರಿಯನ್ನು ತೋರುತ್ತೇವೆ. ಇದರಿಂದ ಅವರ ಮುಂದಿನ ಪೀಳಿಗೆಗೆ ಬೆಳೆವ ವಯಸ್ಸಿನಲ್ಲಿ ಒಳ್ಳೆಯ ಬೆಂಬಲ ದೊರಕುತ್ತದೆ, ಮತ್ತು ಕನಸು ನನಸಾಗಿಸುವ ಬದುಕು ದೊರೆಯುತ್ತದೆ. ನಮ್ಮ ಬಹಳಷ್ಟು ವಿದ್ಯಾರ್ಥಿಗಳಿಗೆ ಅವರ ಭವಿಷ್ಯದ ಬದುಕಿನ ಸಾಧ್ಯತೆಗಳ ರುಚಿ ತೋರಿಸಬೇಕಾದವರೇ ನಾವು’. ಈ ಮಾತು ಅವಕಾಶವಂಚಿತ ಮಕ್ಕಳಿರುವ ಶಾಲೆಗಳಲ್ಲಿ ಪ್ರಾಂಶುಪಾಲರ ಪಾತ್ರದ ಬಗ್ಗೆ ಲಾಸನ್ ಅವರು ನಡೆಸಿದ ಸಂಶೋಧನೆಯಲ್ಲಿ (2005), ಒಬ್ಬ ಪ್ರಾಂಶುಪಾಲರು ಹಂಚಿಕೊಂಡಿರುವುದು.” ಶಿಕ್ಷಣವು ಬದುಕಿನ ದಾರಿಗಳ ಆಯ್ಕೆಯನ್ನು ನೀಡಬಲ್ಲುದಾದರೆ, ಸಮಾನ ಮತ್ತು ಗುಣಮಟ್ಟದ ಶಿಕ್ಷಣದಲ್ಲಿ ಮಕ್ಕಳ ಭಾಗವಹಿಸುವಿಕೆ ಅತ್ಯಗತ್ಯವಾಗುತ್ತದೆ”.

ಕೃತಙ್ಞತೆಗಳು:

ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕ ಮಂಡ್ಯದ ಮುಖ್ಯ ಶಿಕ್ಷಕರಾದ ಶ್ರೀನಿವಾಸಮೂರ್ತಿಯವರೊಡನೆ ಶಾಲೆಯಲ್ಲೇ ಮಾತುಕತೆ ನಡೆಸಲಾಯಿತು. ಅಜೀಂ ಪ್ರೇಮ್ ಜಿ ಪೌಂಡೆಷನ್‌, ಮಂಡ್ಯ ಜಿಲ್ಲಾ ಸಂಸ್ಥೆಯ ಸದಸ್ಯರಾದ ಶಿವಶಂಕರ್ ಮತ್ತು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಬೋಧಕ ಸದಸ್ಯರಾದ ರಾಜಶ್ರೀ ಅವರು ಮೂರ್ತಿಯವರೊಡನೆ ಮಾತುಕತೆ ನಡೆಸಿದರು. ಶಾಲಾ ಭೇಟಿಗೆ ಮೊದಲು ಮಂಡ್ಯ ಜಿಲ್ಲಾ ಸಂಸ್ಥೆಯು ಶ್ರೀನಿವಾಸಮೂರ್ತಿಯವರ ಬಗ್ಗೆ ಸಿದ್ಧಪಡಿಸಿದ್ದ ಪರಿಚಯ ಸಾರಾಂಶವನ್ನು ಇಲ್ಲಿ ಉಪಯೋಗಿಸಲಾಗಿದೆ. ಸ.ಹಿ.ಪ್ರಾ.ಶಾಲೆ, ಚಿಕ್ಕಮಂಡ್ಯದ ಮಕ್ಕಳು, ಅಡಿಗೆಯವರು ಮತ್ತು ಉಸ್ತುವಾರೀ ನೋಡಿಕೊಳ್ಳುವವರಿಗೆ, ನಮ್ಮೊಡನೆ ನಡೆಸಿದ ಸಂವಾದಕ್ಕಾಗಿ ನಮ್ಮ ಕೃತಙ್ಞತೆಗಳು. ತಮ್ಮ ವೃತ್ತಿ ಜೀವನದ ಪಯಣವನ್ನು ನಮ್ಮೊಡನೆ ಹಂಚಿಕೊಂಡ ಶ್ರೀನಿವಾಸಮೂರ್ತಿಯವರಿಗೆ ನಾವು ಆಭಾರಿಯಾಗಿದ್ದೇವೆ.

ಆಕರಸೂಚಿ:

Lawson, J, E .2005. Leading in the inner city: critical issues and essential supports for novice school principals. Education Mosaics. University of Manitoba, Canada. https://umanitoba.ca/faculties/education/media/_Lawson-2005.pdf
NCERT (National Council for Educational Research and Training). 2005. National Curriculum Framework. New Delhi: NCERT.
NCTE (National Council of Teacher Education). 2009. National curricular framework for teacher education. New Delhi: NCTE.
Sinha and Reddy. 2011. School Dropouts or ‘pushouts’? Overcoming barriers for the Right of Education. In R. Govinda (eds). Who goes to School? Exploring Exclusion in Indian Education. (pp166-204). New Delhi: Oxford University Press.

Print Friendly, PDF & Email

Leave a Reply

Your email address will not be published.

Scroll to top