Notes on Strategy

ಅವಕಾಶವಂಚಿತರಿಗೆ ಗುಣಮಟ್ಟದ ಶಾಲಾ ಶಿಕ್ಷಣ – ಒಳಗೊಳ್ಳುವ ಸಮಾಜಕ್ಕಾಗಿ ಶಿಕ್ಷಕರು

ಸಮಾಜದಲ್ಲಿನ ಅವಕಾಶವಂಚಿತ ವರ್ಗದ ಮಕ್ಕಳಿಗೆ ಪ್ರವೇಶಾವಕಾಶ ಹಾಗು ಗುಣಮಟ್ಟದ ಶಿಕ್ಷಣ ದೊರಕುವಂತೆ ಮಾಡುವಲ್ಲಿ ಮತ್ತು ಅಂಥ ಶಿಕ್ಷಣವನ್ನು ದೊರಕಿಸುವಲ್ಲಿ ಉತ್ಕೃಷ್ಟ ಕೆಲಸ ಮಾಡಿರುವ ಹಾಗೂ ಮಾಡುತ್ತಿರುವ ಸರ್ಕಾರಿ ಶಾಲಾ ಶಿಕ್ಷಕರ ಕೆಲಸವನ್ನು ದಾಖಲು ಮಾಡುವುದು

Print Friendly, PDF & Email

ಅವಕಾಶವಂಚಿತರಿಗೆ ಗುಣಮಟ್ಟದ ಶಾಲಾ ಶಿಕ್ಷಣ – ಒಳಗೊಳ್ಳುವ ಸಮಾಜಕ್ಕಾಗಿ ಶಿಕ್ಷಕರು

ಶಿಕ್ಷಕರ ಅನುಭವ ಹಂಚಿಕೆ ಕಾರ್ಯಾಗಾರದ ವರದಿ (29 ಜೂನ್ 2019, ಅಜೀಂ ಪ್ರೇಮ್ ಜಿ ಶಾಲೆ, ಕಲಬುರಗಿ)

ಪೀಠಿಕೆ

You can read this is English here

ಸಮಾಜದಲ್ಲಿನ ಅವಕಾಶವಂಚಿತ ವರ್ಗದ ಮಕ್ಕಳಿಗೆ ಪ್ರವೇಶಾವಕಾಶ ಹಾಗು ಗುಣಮಟ್ಟದ ಶಿಕ್ಷಣ ದೊರಕುವಂತೆ ಮಾಡುವಲ್ಲಿ ಮತ್ತು ಅಂಥ ಶಿಕ್ಷಣವನ್ನು ದೊರಕಿಸುವಲ್ಲಿ ಉತ್ಕೃಷ್ಟ ಕೆಲಸ ಮಾಡಿರುವ ಹಾಗೂ ಮಾಡುತ್ತಿರುವ ಸರ್ಕಾರಿ ಶಾಲಾ ಶಿಕ್ಷಕರ ಕೆಲಸವನ್ನು ದಾಖಲು ಮಾಡುವುದು “ಅವಕಾಶ ವಂಚಿತರಿಗೆ ಗುಣಮಟ್ಟದ ಶಾಲಾ ಶಿಕ್ಷಣ ಯೋಜನೆಯ ಒಳಗೊಳ್ಳುವ ಸಮಾಜಕ್ಕೆ ಶಿಕ್ಷಕರು ಸರಣಿ’ ಕಾರ್ಯಕ್ರಮದ ಉದ್ದೇಶ. ಶಿಕ್ಷಕರೊಂದಿಗಿನ ಈ ಕೆಲಸದಲ್ಲಿ ಎರಡು ಅಂಶಗಳಿವೆ ಅ) ಅಂಥ ಪ್ರತಿಯೊಬ್ಬ ಶಿಕ್ಷಕರೊಡನೆ ಪ್ರತ್ಯೇಕವಾಗಿ ಸಂವಾದ ನಡೆಸಿ ಅವರ ಅನುಭವವನ್ನು ಪ್ರತಿಫಲನಾತ್ಮಕವಾಗಿ ದಾಖಲಿಸುವುದು ಆ) ಈ ಎಲ್ಲ ಶಿಕ್ಷಕರನ್ನು ಒಂದೇ ವೇದಿಕೆಗೆ ಕರೆಸಿ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುವಂತೆ ಮಾಡುವ ಮೂಲಕ ಇನ್ನಿತರ ಶಿಕ್ಷಕರೂ ಇಂತಹ ಉಪಕ್ರಮಗಳಲ್ಲಿ ತೊಡಗುವಂತೆ ಉತ್ತೇಜಿಸುವುದು.

ಕರ್ನಾಟಕದ ಅಜೀಂ ಪ್ರೇಮ್ ಜಿ ಫೌಂಡೇಷನ್ ನ ವಿವಿಧ ಜಿಲ್ಲಾ ಸಂಸ್ಥೆಗಳ ಕೆಲವು ಸದಸ್ಯರು ಮತ್ತು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಕೆಲವು ಬೋಧಕರು ಆ ಶಿಕ್ಷಕರೊಡನೆ ಮಾತನಾಡಿ ಅವರ ಭರವಸೆ, ಧೈರ್ಯ ಮತ್ತು ಸ್ಫೂರ್ತಿಯ ಕಥೆಗಳನ್ನು ದಾಖಲಿಸಿದರು. ಸಮಾಜದ ಅವಕಾಶ ವಂಚಿತ ವರ್ಗಗಳ ಮಕ್ಕಳೊಂದಿಗೆ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಶಾಲಾ ಶಿಕ್ಷಕರ ವೃತ್ತಿಪರ ಕೆಲಸವನ್ನು ಅಭ್ಯಸಿಸಲು, ದಾಖಲಿಸಲು ಮತ್ತು ಪ್ರತಿನಿಧಿಸಲು ‘ಅವಕಾಶವಂಚಿತರಿಗೆ ಗುಣಮಟ್ಟದ ಶಾಲಾ ಶಿಕ್ಷಣ’ ಯೋಜನೆಯ ಶಿಕ್ಷಕರ ಕಥನ ಭಾಗವು ಮುಡಿಪಾಗಿದೆ. ಈ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಶಿಕ್ಷಕರು ನಾಲ್ಕು ಗೋಡೆಗಳ ನಡುವೆ ನಡೆಸುವ ಪಾಠ ಪ್ರವಚನಗಳ ಸಾಂಪ್ರದಾಯಿಕ ಪದ್ದತಿಯನ್ನು ಮೀರಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಶಿಕ್ಷಕರು ದಿನನಿತ್ಯ ತಮ್ಮ ಆಚರಣೆಯಲ್ಲಿ ವಿದ್ಯಾರ್ಥಿಗಳೊಡನೆ ಬೋಧನೆ, ಕಲಿಕೆ, ಶಾಲಾ ಜೀವನವನ್ನು ಒಳಗೊಂಡು ತಳಮಟ್ಟದಲ್ಲಿ ಹೊರಹೊಮ್ಮಿಸಿದ ಚಿಂತನೆಗಳನ್ನು ಈ ಸಂಕಥನಗಳು ಸಾರುತ್ತವೆ. ಇಲ್ಲಿ ಪ್ರಸ್ತುತಪಡಿಸಿರುವ ಪ್ರತಿಫಲನಾತ್ಮಕ ಅನುಭವಗಳು ಶಿಕ್ಷಕರನ್ನು ಖುದ್ದು ಸಂದರ್ಶಿಸಿ ಅವರ ಸಾಧನೆಗಳನ್ನು ಅವರಿಂದಲೇ ಕೇಳಿ ಬರಹರೂಪಕ್ಕಿಳಿಸಿದ ಕಥನಗಳಾಗಿವೆ. ಈ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಬದುಕಿನಲ್ಲಿ ನಿಕಟವಾಗಿ ಬೆರೆತು ಜಾತಿ, ಧರ್ಮ, ವರ್ಗ ಮತ್ತಿತರ ಸಾಂಸ್ಥಿಕ ಮತ್ತು ಅಧಿಕಾರಿವರ್ಗದ ಸಂರಚನೆಯ ಗಡಿಗಳನ್ನು ದಾಟಿದ ಸಾಧನೆಯನ್ನು ಇವು ಬಿಂಬಿಸುತ್ತವೆ. ಕಡೆಗಣಿಸಲ್ಪಟ್ಟ ಮಕ್ಕಳನ್ನು ಒಳಗೊಳ್ಳುವ ನಿಟ್ಟಿನಲ್ಲಿ ಅವರ ವಿವಿಧ ಪ್ರಯತ್ನಗಳ ಒಳನೋಟಗಳನ್ನು ನೀಡುವುದರ ಜೊತೆಗೆ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಶಾಲೆ ಮತ್ತು ತರಗತಿಗಳಲ್ಲಿ ಮಕ್ಕಳು ಹೇಗಿರಬೇಕು ಎಂಬ ಕಲ್ಪನೆಯನ್ನು ಇವು ಬಿಂಬಿಸುತ್ತವೆ. ಆಳವಾದ ವಿಷಯ ಜ್ಞಾನದ ಜೊತೆಗೆ ತಮ್ಮ ಕೆಲಸಕ್ಕೆ ಸಂಬಂಧಿಸಿದ ತಮ್ಮ ನಂಬಿಕೆ ಮತ್ತು ಧೋರಣೆಗಳು, ತಮ್ಮ ವೃತ್ತಿ ಬದುಕಿನಲ್ಲಿ ಎದುರಿಸುತ್ತಿರುವ ಸವಾಲು ಹಾಗೂ ಪ್ರವಾಹದ ವಿರುದ್ಧ ಹೋರಾಡುವ ಗಟ್ಟಿತನ, ಅವರ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪರಿಸರ ; ಅವರ ವೃತ್ತಿಪರ ಅಸ್ಮಿತೆಗಳು, ವಿದ್ಯಾರ್ಥಿಗಳು, ಪೋಷಕರು ಮತ್ತು ಸ್ಥಳೀಯ ಸಮುದಾಯದೊಂದಿಗಿನ ಅವರ ಒಡನಾಟದಿಂದ ಹೊಮ್ಮಿದ ವಿವೇಕ – ಎಲ್ಲವನ್ನೂ ಈ ಕಥನಗಳು ಚಿತ್ರಿಸುತ್ತವೆ. ದೇಶದ ಬಹುಸಂಖ್ಯಾತ ಮಕ್ಕಳು ಹೋಗುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಬಗ್ಗೆ ವಿಭಿನ್ನ ಪರಿಕಲ್ಪನೆಯನ್ನು ಈ ಕಥನಗಳು ಒದಗಿಸುತ್ತವೆ.

ಈ ಎಲ್ಲ ಕಥನಗಳನ್ನು ವಿಶ್ವವಿದ್ಯಾಲಯದ https://practiceconnect.azimpremjiuniversity.edu.in/category/practice-insights/teachers-for-inclusive-society/ ಅಂತರ್ಜಾಲತಾಣದಲ್ಲಿ ಓದಬಹುದಾಗಿದೆ. ಅಜೀಂ ಪ್ರೇಮ್ ಜಿ ಶಾಲೆ, ಕಲಬುರಗಿಯಲ್ಲಿ, 29 ಜೂನ್ 2019ರಂದು ಜರುಗಿದ ಅನುಭವ ಹಂಚಿಕೆಯ ಕಾರ್ಯಾಗಾರವು ಈ ದಾಖಲೀಕರಣದ ಮುಂದುವರೆದ ಭಾಗವಾಗಿತ್ತು. ಈ ಯೋಜನೆಯಲ್ಲಿ ತೊಡಗಿಕೊಂಡಿದ್ದ ಶಿಕ್ಷಕರು, ಆಯ್ದ ಜಿಲ್ಲೆಗಳ ಆಹ್ವಾನಿತ ಶಿಕ್ಷಕರು, ಅಜೀಂ ಪ್ರೇಮ್ ಜಿ ಫೌಂಡೇಷನ್ ಸದಸ್ಯರು, ವಿಶ್ವವಿದ್ಯಾಲಯದ ಬೋಧಕರು, ಎಲ್ಲರೂ ಒಟ್ಟಾಗಿ ಸೇರಿ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಕ್ಕಾಗಿ ಅನುಭವ ಹಂಚಿಕೆಯ ಮೂಲಕ ಕಲಿಯುವುದು ಈ ಕಾರ್ಯಾಗಾರದ ಆಶಯವಾಗಿತ್ತು.

ತಾರ್ಕಿಕತೆ ಮತ್ತು ಉದ್ದೇಶಗಳು

ನಮ್ಮ ದೇಶದಲ್ಲಿ ವೈವಿಧ್ಯಮಯ ಆಚರಣೆಗಳು, ವಿಭಿನ್ನ ಸಾಂಸ್ಕೃತಿಕ ಮತ್ತು ಸಾಂಸ್ಥಿಕ ಸನ್ನಿವೇಶಗಳು ಮತ್ತು ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತಿರುವ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಂಶಗಳಿಂದಾಗಿ ತೀವ್ರವಾದ ವಿಚಾರ ಮಂಥನ ನಡೆಸಬೇಕಾದ ಅಗತ್ಯವಿದೆ. ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯವೂ ಸೇರಿದಂತೆ ಅಜೀಂ ಪ್ರೇಮ್ ಜಿ ಫೌಂಡೇಷನ್ ನಡೆಸುತ್ತಿರುವ ಕೆಲಸ ಕಾರ್ಯಗಳಿಗೆ ಇಂತಹ ಜ್ಞಾನ ಸಂವರ್ಧನಾ ಪೂರಕ ಚರ್ಚೆಗಳು ನೆರವಾಗಬಲ್ಲವು. ನಮ್ಮ ಜಿಲ್ಲಾ ಸಂಸ್ಥೆಗಳ ಸದಸ್ಯರು, ವಿಶ್ವವಿದ್ಯಾಲಯದ ಬೋಧಕರು ಮತ್ತು ನಮ್ಮ ಜಿಲ್ಲಾ ಸಂಸ್ಥೆಗಳು ಒಡಗೂಡಿ ನಿರಂತರ ಕೆಲಸ ಮಾಡುತ್ತಿರುವ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಕರೆತರಲು ಈ ಕಾರ್ಯಕ್ರಮ ಅವಕಾಶ ನೀಡಿತು. ಇದರ ಮುಖ್ಯ ಧ್ಯೇಯಗಳು: 1) ಕಡೆಗಣಿತ ವರ್ಗದವರಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಉತ್ಕೃಷ್ಟ ಕೆಲಸ ಮಾಡುತ್ತಿರುವ ಶಿಕ್ಷಕರಿಂದ ಆಲಿಸುವುದು 2) ಈ ಶಿಕ್ಷಕರು ಕೈಕೊಂಡ ಕೆಲಸಗಳಿಂದ ಸ್ಫೂರ್ತಿಗೊಂಡು ತಮ್ಮ ಶಾಲೆಗಳಲ್ಲಿ ಇಂತಹ ಉಪಕ್ರಮಗಳನ್ನು ಅನುಕರಿಸಲು ಬದ್ಧರಾದ ರಾಜ್ಯದ ಶಿಕ್ಷಕರನ್ನು ಒಂದೆಡೆ ಸೇರಿಸುವುದು 3) ವಿಶ್ವವಿದ್ಯಾಲಯದ ಬೋಧಕರು ಮತ್ತು ಜಿಲ್ಲಾ ಸಂಸ್ಥೆಗಳ ಸದಸ್ಯರುಗಳು, ಸಾರ್ವಜನಿಕ ಶಾಲಾ ವ್ಯವಸ್ಥೆಯಲ್ಲಿ ಈ ಶಿಕ್ಷಕರು ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಿನ ಅರಿವನ್ನು ಪಡೆದುಕೊಳ್ಳುವುದು ಮತ್ತು ಆ ಮೂಲಕ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟದ ಹೆಚ್ಚಳಕ್ಕೆ ಒಟ್ಟಾಗಿ ಕೈ ಜೋಡಿಸಿ ಕೆಲಸ ಮಾಡುವುದು.
ಈ ಕಾರ್ಯಾಗಾರವು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಫೌಂಡೇಷನ್ ನ ಬದ್ಧತೆಗೆ ಸರಿಹೊಂದುತ್ತದೆ. ಅಲ್ಲದೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ ಶಿಕ್ಷಕರು, ಜಿಲ್ಲಾ ಸಂಸ್ಥೆಗಳ ಸದಸ್ಯರು, ವಿಶ್ವವಿದ್ಯಾಲಯದ ಬೋಧಕರು ಒಟ್ಟಾಗಿ ಸೇರಿ ಕಲಿಕಾ ಬಳಗವಾಗಿ ಬೆಳೆಯುವ ರೂಪುಗೊಳ್ಳುವ ರೀತಿಯಲ್ಲಿ ಪರಿಕಲ್ಪಿಸಲಾಗಿದೆ. ಚಿಂತನಶೀಲ ಮತ್ತು ಬದ್ಧ ಶಿಕ್ಷಕ ಸಮುದಾಯದವರನ್ನು ಆಹ್ವಾನಿಸುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಾಮೂಹಿಕ ಬದ್ಧತೆಯನ್ನು ಹೆಚ್ಚಿಸುವ ಸಮಾನ ಮನಸ್ಕ ವೃತ್ತಿಬಾಂಧವರ ನಡುವೆ ಪರಸ್ಪರ ಒಡನಾಟವನ್ನು ಬೆಳೆಸಬಹುದೆಂಬುದು ನಮ್ಮ ಅನಿಸಿಕೆಯಾಗಿದೆ. ಈ ಯೋಜನೆ ಮತ್ತು ತರುವಾಯದ ಜ್ಞಾನ ಹಂಚಿಕೆ ಕಾರ್ಯಾಗಾರ, ಶೈಕ್ಷಣಿಕ ಸಂಶೋಧನೆ ಮತ್ತು ಆಚರಣೆಗಳನ್ನು ಸಮ್ಮಿಳಿತಗೊಳಿಸುವ ಸಾಧ್ಯತೆಗಳನ್ನು ಹುಡುಕಲು ಬೋಧಕರಿಗೆ ಒಂದು ಅವಕಾಶ ಒದಗಿಸಿತು.
ಕಾರ್ಯಾಗಾರದ ವ್ಯಾಪ್ತಿ, ರೂಪುರೇಷೆ ಮತ್ತು ಭಾಗವಹಿಸಿದವರು

ಕಾರ್ಯಾಗಾರವನ್ನು ಶನಿವಾರದ ಒಂದು ದಿನದ ಕಾರ್ಯಕ್ರಮವನ್ನಾಗಿ ಯೋಜಿಸಲಾಗಿತ್ತು. ಬೆಳಗಿನ ಅವಧಿಯಲ್ಲಿ ಹನ್ನೊಂದು ಪ್ರಮುಖ ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡ ಇತರರೊಡನೆ ತಮ್ಮ ಕೆಲಸದ ಬಗ್ಗೆ ಸಂಭಾಷಿಸಲು ಮತ್ತು ಚರ್ಚಿಸಲು ಅನುವು ಮಾಡಿಕೊಡಲಾಯಿತು. ತಲಾ ಐದು ಶಿಕ್ಷಕರು ಒಂದೊಂದು ಗುಂಪಿನಲ್ಲಿದ್ದು ತಮ್ಮ ಅನುಭವ ಹಂಚಿಕೊಳ್ಳುವಂತೆ ಎರಡು ವೇದಿಕೆಗಳಲ್ಲಿ ಸಂವಾದಗಳನ್ನು (panel discussions) ಆಯೋಜಿಸಲಾಗಿತ್ತು. ಭಾಗವಹಿಸುವ ಕೆಲವು ಶಿಕ್ಷಕರಷ್ಟೇ ಅಲ್ಲದೇ ಇನ್ನೂ ಹೆಚ್ಚಿನ ಶಿಕ್ಷಕರ ದನಿಗಳನ್ನು ಈ ವೇದಿಕೆಯಲ್ಲಿ ಆಲಿಸಲು ನಿರ್ಧರಿಸಲಾಯಿತು. ಹಾಗಾಗಿ ಕರ್ನಾಟಕದ ಹತ್ತರಲ್ಲಿ ಎಂಟು ಜಿಲ್ಲಾ ಸಂಸ್ಥೆಗಳಿಂದ ಐದೈದು ಬದ್ಧ ಶಿಕ್ಷಕರಂತೆ ಒಟ್ಟು 45 ಶಿಕ್ಷಕರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಆದ್ದರಿಂದ ಮಧ್ಯಾಹ್ನದ ಅವಧಿಯಲ್ಲಿ ಭಾಗವಹಿಸಿದ್ದ (ಪ್ರಕರಣ ಅಧ್ಯಯನದ ಭಾಗವಾಗಿರದ) ಇತರ ಶಿಕ್ಷಕರು ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ತಮ್ಮ ವಿಚಾರಗಳನ್ನು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡಲಾಯಿತು. ಹೀಗೆ ಸಹ ಅಧ್ಯಾಪಕರೊಡನೆಯ ಸಂವಾದಗಳು ಇತರ ಶಿಕ್ಷಕರು ಕಡೆಗಣಿತ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಕೈಗೊಳ್ಳಬೇಕಾದ ಆಚರಣೆಗಳ ಬಗ್ಗೆ ಆಳವಾದ ಒಳ ನೋಟಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂಬುದು ನಮ್ಮ ಆಲೋಚನೆಯಾಗಿತ್ತು. ಮಧ್ಯಾಹ್ನದ ಅವಧಿಗಳನ್ನು ಸುಗಮಕಾರರೊಂದಿಗೆ ಸಣ್ಣ ಸಣ್ಣ ಗುಂಪು ಚರ್ಚೆಗಳನ್ನಾಗಿ ಯೋಜಿಸಲಾಯಿತು. ಕೊಪ್ಪಳ, ರಾಯಚೂರು, ಬಳ್ಳಾರಿ, ಕಲಬುರಗಿ,
ಬಾಗಲಕೋಟೆ, ವಿಜಯಪುರ, ಮಂಡ್ಯ, ಯಾದಗಿರಿ ಜಿಲ್ಲೆಗಳ 11 ಯೋಜನಾ ಸಹಭಾಗಿಗಳು ಮತ್ತು ಈ ಪ್ರತಿಯೊಂದು ಜಿಲ್ಲೆಗಳಿಂದಲೂ ತಲಾ ಐದೈದು ಶಿಕ್ಷಕರು ಮತ್ತು ಕಲಬುರಗಿ ಜಿಲ್ಲಾ ಸಂಸ್ಥೆಯ ಸದಸ್ಯರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕರೊಡನೆ ಸಂವಾದ ನಡೆಸಿದ್ದ ಜಿಲ್ಲಾ ಸಂಸ್ಥೆಯ ಸದಸ್ಯರು ಮತ್ತು ವಿಶ್ವವಿದ್ಯಾಲಯದ ಬೋಧಕರು ಸೇರಿದಂತೆ ಒಟ್ಟು 70 ಜನ ಪಾಲ್ಗೊಂಡಿದ್ದರು.

ಕಾರ್ಯಾಗಾರಕ್ಕೆ ಪೂರ್ವಭಾವಿ ಚಟುವಟಿಕೆಗಳು ಮತ್ತು ಪ್ರಕ್ರಿಯೆಗಳು

ಅಸಾಧಾರಣ ಕೆಲಸ ಮಾಡಿದ ಶಿಕ್ಷಕರ ಅನುಭವ ಹಂಚಿಕೆಗಾಗಿ ವೇದಿಕೆ ಒದಗಿಸುವಂತೆ ಈ ಕಾರ್ಯಾಗಾರವನ್ನು ರೂಪಿಸಲಾಗಿತ್ತು. ಶಿಕ್ಷಕರ ನಿರೂಪಣೆಗಳನ್ನು ಮೊದಲಿಗೆ ಇಂಗ್ಲೀಷಿನಲ್ಲಿ ದಾಖಲಿಸಲಾಗಿತ್ತು. ಇವನ್ನು ವಿಶ್ವವಿದ್ಯಾಲಯದ ಅನುವಾದ ಉಪಕ್ರಮ ತಂಡದಿಂದ ಕನ್ನಡಕ್ಕೆ ಅನುವಾದಿಸಿ ‘ಹೂ ಗುಚ್ಛ’ ಸಂಕಲನವಾಗಿ ಹೊರತರಲಾಯಿತು. ಆ ಹನ್ನೊಂದು ಕಥನಗಳನ್ನು ಭಾಗವಹಿಸಲಿದ್ದ ಶಿಕ್ಷಕರು, ಜಿಲ್ಲಾ ಸಂಸ್ಥೆಯ ಸದಸ್ಯರು ಮತ್ತು ವಿಶ್ವವಿದ್ಯಾಲಯದ ಬೋಧಕರಿಗೆ ಕಳುಹಿಸಲಾಯಿತು. ಬೆಳಗಿನ ಮತ್ತು ಮಧ್ಯಾಹ್ನದ ಕಲಾಪಗಳಿಗೆ ಸುಗಮಕಾರರನ್ನು ಗುರುತಿಸಿ ಹನ್ನೊಂದು ಕಥನಗಳನ್ನು ಮೂರು ಉಪವಿಷಯಗಳಡಿ ವಿಭಾಗಿಸಿ ಕಿರು ಗುಂಪುಗಳಲ್ಲಿ ಚರ್ಚೆ ಮಾಡಲಾಯಿತು. ಸಮುದಾಯ-ಶಾಲೆಗಳ ಸಹಭಾಗಿತ್ವ, ತರಗತಿಯನ್ನೂ ಮೀರಿದ ಕಲಿಕೆ ಮತ್ತು ಹೆಣ್ಣು ಮಗುವಿನ ಶಿಕ್ಷಣ ಇವು ಗಮನ ನೀಡಿದ ವಿಷಯಗಳಾಗಿದ್ದವು. ಚರ್ಚೆಗೆ ಅನುಕೂಲವಾಗುವಂತೆ ಕೆಲವು ಅಂಶಗಳನ್ನು ಪ್ರಶ್ನೆಗಳಾಗಿ ಸೂಚಿಸಲಾಗಿತ್ತು.

I. ಸಮುದಾಯ-ಶಾಲೆ ಸಹಭಾಗಿತ್ವ

1. ಮಕ್ಕಳು ಶಾಲೆಗೆ ಸೇರಲು ಹಾಗೂ ನಿಯತವಾಗಿ ಹಾಜರಾಗಲು ಶಿಕ್ಷಕರು / ಶಾಲೆಯು ಸಮುದಾಯದ ಜೊತೆ ಸೇರಿ ತೆಗೆದುಕೊಂಡ ನಿರ್ದಿಷ್ಟ ಕ್ರಮಗಳೇನು? ನಿರ್ದಿಷ್ಟ ಉದಾಹರಣೆಗಳನ್ನು ಹೇಳಬಹುದೇ?
2. ಈ ಪ್ರಕ್ರಿಯೆಯಲ್ಲಿ ಶಿಕ್ಷಕರು ಎದುರಿಸಿದ ಸವಾಲುಗಳು ಮತ್ತು ಯಶಸ್ಸಿನ ಕಥನಗಳು ಯಾವುವು?
3. ಅವರು ಪ್ರಯತ್ನಿಸಿರದ ಆದರೆ, ಅದು ಕೆಲಸ ಮಾಡಬಹುದು ಎಂಬ ಇಂಗಿತವಿರುವ ಯಾವುದಾದರೂ ಆಲೋಚನೆಗಳಿವೆಯೇ? ಅದನ್ನು ಮಾಡಲು ಯಾವ ರೀತಿಯ ಬೆಂಬಲದ ಅಗತ್ಯವಿದೆ ಎಂದು ಎನಿಸುತ್ತದೆ ?

II. ತರಗತಿಯಾಚೆಗೂ ಕಲಿಕೆ

ಸ್ಥೂಲವಾಗಿ ಈ ವಿಷಯವು ತರಗತಿ ಬೋಧನೆಯ ಸಾಮಾನ್ಯ ನಿರೀಕ್ಷೆಗಳನ್ನೂ ಮೀರಿ ಮಕ್ಕಳ ಕಲಿಕೆಗೆ ಶಿಕ್ಷಕರ ಪರಿಶ್ರಮವನ್ನು ಒಳಗೊಳ್ಳುತ್ತದೆ. ಇವು ಮಕ್ಕಳನ್ನು ಪರೀಕ್ಷೆಗಳಿಗೆ ಸಿದ್ದಗೊಳಿಸಲು ಮಾಡಿದ ನಿರ್ದಿಷ್ಟ ಪ್ರಯತ್ನಗಳಿರಬಹುದು (ಕೇವಲ ಸಂಯೋಜಿಸುವುದು ಅಥವಾ ಮಕ್ಕಳ ಪರವಾಗಿ ಅರ್ಜಿ ನಮೂನೆ ಭರ್ತಿಮಾಡುವುದಷ್ಟೇ ಅಲ್ಲದೆ), ಪ್ರಯೋಗಾಲಯಗಳನ್ನು ಸಜ್ಜು ಗೊಳಿಸುವುದಿರಬಹುದು, ಕಲಿಕಾ ಸಾಮಗ್ರಿಗಳನ್ನು ತಯಾರಿಸುವುದಿರಬಹುದು, ನಿರ್ದಿಷ್ಟ ಸ್ಥಳಗಳಿಗೆ ಶೈಕ್ಷಣಿಕ ಪ್ರವಾಸಗಳಿಗೆ ಕರೆದೊಯ್ಯುವುದಿರಬಹುದು, ಶಾಲಾ ಅವಧಿಯ ನಂತರ, ಅಸಮರ್ಥತೆಯುಳ್ಳ ಅಥವಾ ಇತರ ಕಲಿಕಾ ನ್ಯೂನತೆಯುಳ್ಳ ಮಕ್ಕಳಿಗೆ ಪಾಠ ಮಾಡುವುದಕ್ಕೆ ವಿಶೇಷ ಪ್ರಯತ್ನಗಳನ್ನು ಮಾಡುವುದು.

1. ಮಕ್ಕಳು ಶಾಲೆಗೆ ಸೇರಲು, ನಿಯತವಾಗಿ ಹಾಜರಾಗಲು, ಶಾಲೆ ಬಿಡದೆ ಉಳಿಯಲು ಮತ್ತು ಕಲಿಯುವಂತೆ ಮಾಡಲು ಪ್ರಭಾವ ಬೀರುವಂತಹ ಯಾವ ಯಾವ ನಿರ್ದಿಷ್ಟ ಪ್ರಯತ್ನಗಳನ್ನು ಶಾಲೆಯಿಂದಾಚೆ ಮಕ್ಕಳೊಡನೆ ಶಿಕ್ಷಕರು ತೆಗೆದುಕೊಂಡಿದ್ದಾರೆ? ಕೆಲವು ನಿರ್ದಿಷ್ಟ ಉದಾಹರಣೆಗಳನ್ನು ಕೊಡಬಹುದೇ?
2. ಈ ಪ್ರಕ್ರಿಯೆಯಲ್ಲಿ ಶಿಕ್ಷಕರು ಎದುರಿಸಿದ ಸವಾಲುಗಳು ಮತ್ತು ಯಶಸ್ಸಿನ ಕಥನಗಳು ಯಾವುವು?
3. ಅವರು ಪ್ರಯತ್ನಿಸಿರದ ಆದರೆ, ಅದು ಕೆಲಸ ಮಾಡಬಹುದು ಎಂಬ ಇಂಗಿತವಿರುವ ಯಾವುದಾದರೂ ಆಲೋಚನೆಗಳಿವೆಯೇ? ಅದನ್ನು ಮಾಡಲು ಯಾವ ರೀತಿಯ ಬೆಂಬಲದ ಅಗತ್ಯವಿದೆ ಎಂದು ಎನಿಸುತ್ತದೆ ?

III. ಹೆಣ್ಣು ಮಗು ಮತ್ತು ಶಿಕ್ಷಣ

ಈಶಾನ್ಯ ಕರ್ನಾಟಕದಲ್ಲಿ ಹೆಣ್ಣ ಮಕ್ಕಳ ಶಿಕ್ಷಣ ಸವಾಲಿನದ್ದೇ ಆಗಿದೆ. ಅದರಲ್ಲೂ ಹೆಣ್ಣು ಮಕ್ಕಳ ಬಗ್ಗೆ ಅಲ್ಲಿ ಇರುವ ಸಾಮಾಜಿಕ ನಡಾವಳಿಗಳು ಮತ್ತು ಇತರ ನಿರೀಕ್ಷೆಗಳಿಂದ ಈ ಸವಾಲು ಹೆಚ್ಚಿನದ್ದಾಗಿದೆ.
ಇದಕ್ಕೆ ಶಾಲೆ ಮತ್ತು ಶಿಕ್ಷಕರು ಹೇಗೆ ಪ್ರತಿಕ್ರಿಯಿಸುತ್ತಾರೆ?
1. ಹೆಣ್ಣು ಮಕ್ಕಳು ಶಾಲೆಗೆ ಸೇರಲು, ನಿಯತವಾಗಿ ಹಾಜರಾಗಲು, ಶಾಲೆ ಬಿಡದೆ ಉಳಿಯಲು ಮತ್ತು ಕಲಿಯುವಂತೆ ಮಾಡಲು ಪ್ರಭಾವ ಬೀರುವಂತಹ ಯಾವ ಯಾವ ನಿರ್ದಿಷ್ಟ ಪ್ರಯತ್ನಗಳನ್ನು ಶಾಲೆಯಿಂದಾಚೆ ಮಕ್ಕಳೊಡನೆ ಶಿಕ್ಷಕರು ತೆಗೆದುಕೊಂಡಿದ್ದಾರೆ? ಕೆಲವು ನಿರ್ದಿಷ್ಟ ಉದಾಹರಣೆಗಳನ್ನು ಕೊಡಬಹುದೇ?
2. ಈ ಪ್ರಕ್ರಿಯೆಯಲ್ಲಿ ಶಿಕ್ಷಕರು ಎದುರಿಸಿದ ಸವಾಲುಗಳು ಮತ್ತು ಯಶಸ್ಸಿನ ಕಥನಗಳು ಯಾವುವು? ಹೆಣ್ಣು ಮಕ್ಕಳು ಶಾಲೆ ಬಿಡಲು ಮುಖ್ಯ ಕಾರಣಗಳಾದ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಸನ್ನಿವೇಶಗಳನ್ನು ಹೇಗೆ ನಿಭಾಯಿಸುವರು?
3. ಅವರು ಪ್ರಯತ್ನಿಸಿರದ ಆದರೆ, ಅದು ಕೆಲಸ ಮಾಡುತ್ತದೆ ಎಂಬ ಬಲವಾದ ನಂಬಿಕೆ ಇರುವ/ಹಾಗೆಂದು ಆಲೋಚಿಸುವ ಯಾವುದಾದರೂ ಕಲ್ಪನೆ ಇದೆಯೇ? ಅದನ್ನು ಮಾಡಲು ಯಾವ ರೀತಿಯ ಬೆಂಬಲದ ಅಗತ್ಯವಿದೆ ಅಥವಾ ಪರಿಭಾವಿಸುತ್ತಾರೆ?

ಈ ಸಂವಾದಗಳು ಸಹೋದ್ಯೋಗಿಗಳೊಡನೆ ಪರಸ್ಪರ ಚರ್ಚೆಗಳಿಗೆ ಎಡೆಮಾಡಿಕೊಟ್ಟು ಕಡೆಗಣಿತ ವರ್ಗದವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರೆಡೆಗೆ ಹೆಚ್ಚಿನ ಒಳನೋಟಗಳನ್ನು ನೀಡಬಹುದೆಂದು ಆಶಿಸಲಾಗಿದೆ.

ಕಾರ್ಯಾಗಾರದ ವಿವರಗಳು ಮತ್ತು ಮುಖ್ಯಾಂಶಗಳು

ಚಿತ್ರ 1:ಶಿಕ್ಷಕರು ನೋಂದಾಯಿಸಿ ಕೊಳ್ಳುತ್ತಿರುವುದು

ಆರಂಭಿಕ ನುಡಿ

ಅಜೀಂ ಪ್ರೇಮ್ ಜಿ ಫೌಂಡೇಶನ್ ನ ಕರ್ನಾಟಕ ರಾಜ್ಯ ಮುಖ್ಯಸ್ಥರಾದ ಉಮಾಶಂಕರ ಪೆರಿಯೋಡಿಯವರು ಅಜೀಂ ಪ್ರೇಮ್ ಜಿ ಫೌಂಡೇಶನ್ ನ ಕಾಣ್ಕೆ, ಉದ್ದೇಶ ಮತ್ತು ಈಶಾನ್ಯ ಕರ್ನಾಟಕದಲ್ಲಿ ಫೌಂಡೇಷನ್ ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಪ್ರತೀ ಮಗುವಿಗೂ ಗುಣಮಟ್ಟದ ಶಿಕ್ಷಣದೊರಕುವಂತೆ ನೋಡಿಕೊಳ್ಳುವ ಸಂವಿಧಾನದ ಆಶಯವನ್ನು ಪೂರೈಸುವ ನಿಟ್ಟಿನಲ್ಲಿ ಫೌಂಡೇಶನ್ ಬದ್ಧವಾಗಿದೆ ಎನ್ನುವುದನ್ನು ಹಂಚಿಕೊಂಡರು. ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದ ಅವರು ಕಾರ್ಯಕ್ರಮದ ಕೇಂದ್ರಬಿಂದುವಾದ ಹತ್ತು ಶಿಕ್ಷಕರರನ್ನು ಸ್ವಾಗತಿಸುತ್ತಾ ಅವರ ಅಸಾಧಾರಣ ಸಾಧನೆಯ ಬಗ್ಗೆ ಪ್ರಸ್ತಾಪಿಸಿದರು. ಕಾರ್ಯಾಗಾರದ ಧ್ಯೇಯೋದ್ದೇಶಗಳನ್ನು ತಿಳಿಸುತ್ತಾ ಅವರು ಈ ಕಾರ್ಯಾಗಾರ ಕೇವಲ ಕಡೆಗಣಿಸಲ್ಪಟ್ಟ ವರ್ಗದ ಮಕ್ಕಳೊಂದಿಗೆ ಕೆಲಸ ಮಾಡಿದ ಈ ಹತ್ತು ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆಯಷ್ಟೇ ಅಲ್ಲ, ಆ ಶಿಕ್ಷಕರು ತರಗತಿಯಾಚೆಗೂ ಕಾರ್ಯನಿರ್ವಹಿಸುತ್ತಾ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದ ಸೇವೆಯನ್ನು ಗುರುತಿಸುವ ಅವಕಾಶವೂ ಕೂಡ ಎಂದು ಹೇಳಿದರು. ತರಗತಿಯಲ್ಲಿ ಶಿಕ್ಷಕರ ಮೇಲಿನ ಸಾಮಾನ್ಯ ನಿರೀಕ್ಷೆಯನ್ನೂ ಮೀರಿ ಮಕ್ಕಳು ಉತ್ತಮ ಶಿಕ್ಷಣ ಪಡೆಯಲೆಂದು ಈ ಶಿಕ್ಷಕರು ಹಾಕಿದ ಪರಿಶ್ರಮವನ್ನು ಉತ್ಕೃಷ್ಟ ಸಾಧನೆ ಎಂದು ಉಲ್ಲೇಖಿಸಿದರು.

ಬೆಳಗಿನ ಅವಧಿ

ಬೆಳಗಿನ ಮೊದಲ ಸಂವಾದ ಅಧಿವೇಶನವನ್ನು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಅಧ್ಯಾಪಕರಾದ ಶರದ್ ಸುರೆ ಅವರು ಸುಗಮಕಾರರಾಗಿ ನಡೆಸಿಕೊಟ್ಟರು. ಮೊದಲಿಗೆ ಶರದ್ ಅವರು ಐದು ಶಿಕ್ಷಕರ ಕೊಡುಗೆಗಳನ್ನು ಸಂಕ್ಷಿಪ್ತವಾಗಿ ತಿಳಿಸಿ ನಂತರದಲ್ಲಿ ಆ ಶಿಕ್ಷಕರೇ ವೈಯಕ್ತಿಕವಾಗಿ ತಮ್ಮ ಅನುಭವವನ್ನು ಹಂಚಿಕೊಳ್ಳಲು ಕೇಳಿದರು. ಬೆಳಗಿನ ಸಂವಾದದ ಎರಡನೆಯ ಅವಧಿಯಲ್ಲಿ ಕಲಬುರ್ಗಿ ಜಿಲ್ಲಾ ಸಂಸ್ಥೆಯ ಮುಖ್ಯಸ್ಥರಾದ ರುದ್ರೇಶ್ ಅವರು ಸುಗಮಕಾರರಾಗಿದ್ದರು. ಈ ಸಂವಾದದಲ್ಲಿ ಮತ್ತೈದು ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಪ್ರತೀ ಶಿಕ್ಷಕರಿಗೂ ಮಾತನಾಡಲು ಇಪ್ಪತ್ತು ನಿಮಿಷಗಳನ್ನು ನೀಡಲಾಗಿತ್ತು. ಶಿಕ್ಷಕರು ತಾವು ಮಾಡಿದ ಕೆಲಸದ ಬಗ್ಗೆ ತುಂಬು ಉತ್ಸಾಹದಿಂದ ಲಘುಹಾಸ್ಯ ಮಿಶ್ರಿತವಾಗಿ ಹಂಚಿಕೊಂಡರು. ಇವು ಬಹಳ ಸ್ಪೂರ್ತಿದಾಯಕವಾಗಿದ್ದವು. ತಮ್ಮ ಕೆಲಸದ ಬಗ್ಗೆ ಸುಲಲಿತವಾಗಿ ಮತ್ತು ಆತ್ಮವಿಶ್ವಾಸದಿಂದ ಅವರುಗಳು ಮಾತನಾಡಿದರು. ಮಕ್ಕಳೊಡನೆಯ ಅವರ ದೈನಂದಿನ ಒಡನಾಟಗಳು, ತರಗತಿಯಲ್ಲಿ ಮಕ್ಕಳ ಗಮನವನ್ನು ಹಿಡಿದಿಡಲು ಮಾಡುವ ಪ್ರಯತ್ನಗಳು, ಬಾಲ್ಯವಿವಾಹ ತಡೆಯುವುದು, ವಲಸಿಗ ಕುಟುಂಬದ ಮಕ್ಕಳ ಜೀವನ-ಪ್ರಪಂಚವನ್ನು ಅರಿತುಕೊಳ್ಳುವುದು, ತಮ್ಮ ಶಾಲೆಯನ್ನು ಒಂದು ಮಾದರಿ ಶಾಲೆಯಾಗಿಸಬೇಕೆಂಬ ಮಹದಾಸೆ ಮತ್ತು ಕಠಿಣ ಪರಿಸರಗಳಿಂದ ಬಂದ ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ಅವರು ತೆಗೆದುಕೊಳ್ಳುವ ಕ್ರಮಗಳು – ಇವು ಅವರು ಹಂಚಿಕೊಂಡ ಮುಖ್ಯ ವಿಷಯಗಳು. ಬೆಳಗಿನ ಅವಧಿಯು ಇತರ ಶಿಕ್ಷಕರಿಗೂ ಒಳ್ಳೆಯ ಕೆಲಸಗಳನ್ನು ಮಾಡಿದರೆ ಅವುಗಳಿಗೆ ಮನ್ನಣೆ ದೊರೆಯುತ್ತದೆ ಎಂಬ ಭರವಸೆಯನ್ನು ನೀಡಿತು. ಭರವಸೆ, ಧೈರ್ಯ, ಉತ್ತೇಜನ, ಮುಕ್ತ ಮನಸ್ಸು, ಸತತ ಕಲಿಕೆಗೆ ತುಡಿತ ಮತ್ತು ಧೃಡಚಿತ್ತ ಇವೆಲ್ಲ ಸಮ್ಮಿಳಿತಗೊಂಡ ‘ಯಶೋಗಾಥೆ’ಯನ್ನು ಕೇಳಿದಾಗ ಸಭೆಯಲ್ಲಿದ್ದ ಎಲ್ಲರೂ “ಈ ಎಲ್ಲ ಸವಾಲುಗಳ ನಡುವೆಯೂ ಈ ಶಿಕ್ಷಕರು ಪಟ್ಟು ಬಿಡದೆ ನಿರಂತರತೆ ಸಾಧಿಸಲು ಹೇಗೆ ಸಾಧ್ಯ” ಎಂದು ಆಲೋಚಿಸಲಾರಂಭಿಸಿದರು.

ಚಿತ್ರ 3: ಬೆಳಗಿನ ಅವಧಿ- ಅಧಿವೇಶನ-1

ಚಿತ್ರ 4: ಶಿಕ್ಷಕರೊಬ್ಬರು ತಮ್ಮ ಚಿಂತನೆಯನ್ನು ಹಂಚಿಕೊಳ್ಳುತ್ತಿರುವುದು

ಚಿತ್ರ 5:ಬೆಳಗಿನ ಅವಧಿ- ಅಧಿವೇಶನ-2

ಊಟದ ಸಮಯದಲ್ಲಿ ಬಹಳಷ್ಟು ಅನೌಪಚಾರಿಕ ಸಂವಾದಗಳು ಶಿಕ್ಷಕರ ನಡುವೆ ನಡೆದವು. ಕಲಬುರ್ಗಿ ಶಾಲೆಯ ಪರಿಸರವನ್ನು ಬಹಳಷ್ಟು ಶಿಕ್ಷಕರು ಮೆಚ್ಚಿದ ಅವರು ಶಾಲೆಯ ಸುತ್ತ ಉತ್ಸಾಹದಿಂದ ಓಡಾಡಿದರು.

ಮಧ್ಯಾಹ್ನದ ಅವಧಿ

ಊಟದ ನಂತರದ ಅವಧಿಯಲ್ಲಿ ಆಯ್ದ ಮೂರು ವಿಷಯಗಳ ಬಗ್ಗೆ ಒಂದೇ ಸಮಯದಲ್ಲಿ ಪರ್ಯಾಯ ವೇದಿಕೆಗಳಲ್ಲಿ ಚರ್ಚೆ ನಡೆಯಿತು: ಶಾಲೆ ಮತ್ತು ಸಮುದಾಯದ ಸಹಭಾಗಿತ್ವ, ತರಗತಿಯಾಚೆಗೂ ಕಲಿಕೆ ಮತ್ತು ಹೆಣ್ಣು ಮಗುವಿನ ಶಿಕ್ಷಣ. ಒಂದೊಂದು ಗುಂಪಿನಲ್ಲೂ 15 ಶಿಕ್ಷಕರಿದ್ದರು. ಒಂದೇ ಸಮಯದಲ್ಲಿ ನಡೆದ ಈ ಮೂರು ಚರ್ಚೆಗಳಲ್ಲಿ ಈಶಾನ್ಯ ಕರ್ನಾಟಕದ ಜಿಲ್ಲಾ ಸಂಸ್ಥೆಗಳ ಉದಯ್, ಸುನಿತಾ ಮತ್ತು ಮಹಾದೇವ್ ಅವರು ವಿವೇಚನಾಯುತವಾಗಿ ಅನುಕೂಲಿಸಿದರು.

ಸಮಾನಾಂತರ ಅಧಿವೇಶನ -1

ಸಮುದಾಯ-ಶಾಲೆ ಸಹಭಾಗಿತ್ವ

ಮಕ್ಕಳ ದಾಖಲಾತಿ ಮತ್ತು ಶಾಲೆ ಬಿಡದಂತೆ ಮಕ್ಕಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮುದಾಯ ಮತ್ತು ಶಾಲೆ ಕೈ ಜೋಡಿಸುವುದರ ಸುತ್ತಲೇ ಈ ಚರ್ಚೆಯಿದ್ದಿತು. ಸಮುದಾಯದ ಸದಸ್ಯರು ಮಕ್ಕಳನ್ನು ಶಾಲೆಗೆ ಸೇರಿಸುವ ಕೆಲಸದಲ್ಲಿ ನೇರವಾಗಿ ಕೈ ಜೋಡಿಸಿದ್ದರು. ಹಳ್ಳಿಯ ಎಲ್ಲೆಡೆಗೂ ತೆರಳಿ ಶಾಲೆಗೆ ಮಕ್ಕಳನ್ನು ಸೇರಿಸಲು ಅರಿವು ಉಂಟು ಮಾಡಲು ಪ್ರಭಾತ ಫೇ಼ರಿಗಳನ್ನು ನಡೆಸಿದರು. ಅಂಗನವಾಡಿ ಕೇಂದ್ರಗಳಿಂದ ಶಾಲೆಗೆ ಸೇರಿಸಬೇಕಾದ ಮಕ್ಕಳ ಮಾಹಿತಿಗಳನ್ನು ಪಡೆಯಲಾಲಾಗುತ್ತಿತ್ತು. ಈ ಮಕ್ಕಳ ತಂದೆತಾಯಿಯರನ್ನು ಸಮುದಾಯದ ಸದಸ್ಯರು ಮತ್ತು ಶಾಲೆಯ ಶಿಕ್ಷಕರು ಖುದ್ದು ಭೇಟಿ ಮಾಡಿ ಶಾಲೆಗೆ ಮಕ್ಕಳನ್ನು ಸೇರಿಸಲು ಅವರನ್ನು ಹುರಿದುಂಬಿಸುತ್ತಿದ್ದರು. ದಾಖಲಾತಿ ಆಂದೋಲನದ ಸಂದರ್ಭದಲ್ಲಿ ಶಾಲೆಯಿಂದಾಗುವ ಅನುಕೂಲಗಳು ಮತ್ತು ಶಾಲೆಯಲ್ಲಿರುವ ವ್ಯವಸ್ಥೆಗಳನ್ನು ಕುರಿತ ಕರಪತ್ರಗಳನ್ನು ಸಮುದಾಯದ ಸದಸ್ಯರು ಮತ್ತು ಶಾಲೆ ಒಟ್ಟಾಗಿ ತಯಾರಿಸಿ ಹಂಚಿದರು. ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಬ್ಯಾಗ್ ಮತ್ತು ಶೂಗಳನ್ನು ವಿತರಿಸುವಾಗ ನೋಂದಾವಣೆಯಾಗಬಹುದಾದ ಸಂಭಾವ್ಯ ಪೋಷಕರನ್ನು ಶಾಲೆಗೆ ಆಹ್ವಾನಿಸಲಾಗುತ್ತಿತ್ತು. ನಿಯಮಿತವಾಗಿ ತಂದೆ ತಾಯಿಯರನ್ನು ಭೇಟಿ ಮಾಡಿ ಮಕ್ಕಳು ಶಾಲೆಗೆ ಸೇರುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯರು ತೆಗೆದುಕೊಳ್ಳುತ್ತಿದ್ದರು.

ತರಗತಿಗಳಲ್ಲಿ ಪಾಠಗಳನ್ನು ಆಸಕ್ತಿಕರವಾಗಿರುವಂತೆ ಮಾಡುವುದೇ ಅಲ್ಲದೇ ಮಕ್ಕಳು ಶಾಲೆ ಬಿಡದಂತೆ ಉಳಿಸಿಕೊಳ್ಳಲು ಇತರ ಹಲವಾರು ಕ್ರಮಗಳನ್ನೂ ತೆಗೆದುಕೊಳ್ಳಲಾಯಿತೆಂದು ಶಿಕ್ಷಕರು ತಿಳಿಸಿದರು. ಮಕ್ಕಳಲ್ಲಿ ಬಾಲ್ಯವಿವಾಹದ ನಿಷೇಧದಂತಹ ಹಲವು ವಿಷಯಗಳ ಬಗ್ಗೆ ಅರಿವು ಮೂಡಿಸಲು ‘ಮಕ್ಕಳ ಗ್ರಾಮಸಭೆ’ಗಳನ್ನು ನಡೆಸಲಾಯಿತು. ನಿಯತವಾಗಿ ಶಿಕ್ಷಕ ಪೋಷಕರ ಸಭೆಗಳನ್ನು ನಡೆಸಲಾಯಿತು. ಶಾಲಾ ವಾರ್ಷಿಕೋತ್ಸವ, ಸ್ಥಳೀಯ ಹಬ್ಬಗಳು ಮತ್ತು ರಾಷ್ಟ್ರೀಯ ಹಬ್ಬಗಳಲ್ಲಿ ಪೋಷಕರು ಪಾಲ್ಗೊಳ್ಳಲು ಸಕ್ರಿಯವಾಗಿ ಕೇಳಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತಂದೆತಾಯಿಯರಿಗೆ ಉತ್ತೇಜಿಸಲಾಗುತ್ತಿತ್ತು. ಬಹು ಸಾಮರ್ಥ್ಯ ಗುಂಪು ವ್ಯವಸ್ಥೆಯಾದ ಪ್ರೇರಣ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಮತ್ತೊಂದು ಮಗುವಿಗೆ ಬೆಂಬಲ ನೀಡಲು ಶಕ್ತರಾದ ಮಕ್ಕಳನ್ನು ನಾಯಕರೆಂದು ಗುರುತಿಸಿ ಅವರಿಗೆ ಸಣ್ಣ ಉತ್ತೇಜಕ ಉಡುಗೊರೆಗಳಾದ ಪೆನ್, ಪೆನ್ಸಿಲ್, ಕಿರು ಪುಸ್ತಕಗಳು ಮುಂತಾದುವುಗಳನ್ನು ನೀಡಲಾಯಿತು.

ಸಮುದಾಯದ ಸಹಭಾಗಿತ್ವವನ್ನು ಗಟ್ಟಿಗೊಳಿಸಲು ಅಗತ್ಯವಾದ ಕೆಲವು ಕ್ರಮಗಳ ಕುರಿತಾಗಿಯೂ ಶಿಕ್ಷಕರು ಪ್ರಸ್ತಾಪಿಸಿದರು. ಸರ್ಕಾರದ ನಿಯಮಗಳಿಗನುಸಾರ ಎಸ್ ಡಿಎಂಸಿಗಳನ್ನು ರಚಿಸಿ ಅವರಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ಹಂಚುವುದು ಅತೀ ಮುಖ್ಯ. ಶಾಲೆಯೆಡೆಗೆ ಕಾಳಜಿ ಹೊಂದಿರುವ ಪೋಷಕರ ಸಭೆಗಳನ್ನು ಆಯೋಜಿಸಿ ಅವರನ್ನು ಮಕ್ಕಳಿಗೆ, ಬೋಧನೆಗೆ ಮತ್ತು ಶಾಲೆಗೆ ಅಗತ್ಯವಾದ ಇತರ ಮೂಲ ಸೌಕರ್ಯ ವ್ಯವಸ್ಥೆಯನ್ನು ಉತ್ತಮಪಡಿಸುವಲ್ಲಿ ತೊಡಗಿಸಿಕೊಳ್ಳಬಹುದು. ಅಂದರೆ ಶಾಲೆಯ ದುರಸ್ತಿ, ಸುಣ್ಣ ಬಣ್ಣ ಮಾಡುವುದು, ವಿದ್ಯುತ್ ಸಂಪರ್ಕ, ಶೌಚಾಲಯದ ವ್ಯವಸ್ಥೆ. ಪೀಠೋಪಕರಣಗಳು, ಪೋಡಿಯಂ, ಕಂಪ್ಯೂಟರ್, ಊಟದ ತಟ್ಟೆ, ಲೋಟ, ನೀರಿನ ಫಿಲ್ಟರ್ (Water filter), ಕ್ರೀಡಾ ಸಮವಸ್ತ್ರ– ಇವುಗಳನ್ನು ಪೂರೈಸುವಲ್ಲಿ ಸಹಾಯವನ್ನು ಪಡೆಯಬಹುದು ಎಂಬುದನ್ನು ಹೇಳಲಾಯಿತು. ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರು ಶಾಲಾ ಕೆಲಸಗಳಿಗೆ ಬದ್ಧರಾಗಿ ಪಾರದರ್ಶಕತೆಯಿಂದ ಶಾಲಾ ವ್ಯವಸ್ಥೆಯನ್ನು ನಡೆಸುತ್ತಾ ಸಮುದಾಯದ ನಂಬಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ಮಕ್ಕಳ ಪ್ರಗತಿಯನ್ನು ಕಾಲ ಕಾಲಕ್ಕೆ ತಿಳಿಸುತ್ತಾ ತಮ್ಮ ಜವಾಬ್ದಾರಿಗಳ ನಿರ್ವಹಣೆ ಬಗ್ಗೆ ಉತ್ತರದಾಯಿತ್ವ ಇದೆ ಎನ್ನುವುದನ್ನು ತೋರಿಸಬೇಕು ಎಂದು ಶಿಕ್ಷಕರು ಹೇಳಿದರು.

ಚಿತ್ರ 6:ಸಮಾನಾಂತರ ಚರ್ಚೆಯ ನಂತರ ವಿಚಾರ ಮಂಡಿಸುತ್ತಿರುವ ಸುಗಮಕಾರರು

ಸಮಾನಾಂತರ ಅಧಿವೇಶನ- 2

ತರಗತಿಯಾಚೆಗೂ ಕಲಿಕೆ

ಮಕ್ಕಳು ತಮ್ಮ ಆಸಕ್ತಿಯನ್ನು ಉಳಿಸಿಕೊಂಡು ಕಲಿಕೆಯನ್ನು ಮುಂದುವರೆಸುವಂತೆ ಮಕ್ಕಳನ್ನು ಉತ್ತೇಜಿಸಲು ಶಿಕ್ಷಕರು ಹಾಕುತ್ತಿರುವ ಪರಿಶ್ರಮದ ಸುತ್ತ ಈ ಚರ್ಚೆ ಕೇಂದ್ರಿತವಾಗಿತ್ತು. ಮಕ್ಕಳನ್ನು ಸುತ್ತಲಿನ ಚಾರಿತ್ರಿಕ ಸ್ಥಳಗಳಿಗೆ ಕರೆದುಕೊಂಡು ಹೋಗುವುದರಿಂದ ಮಕ್ಕಳಲ್ಲಿ ಆಸಕ್ತಿ ಉಂಟಾಗಿ ಅವರು ತಮ್ಮ ಊರಿನ ಸುತ್ತ ಇರುವ ಇಂತಹ ಸ್ಥಳಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ. ಕೆಲವು ಜಿಲ್ಲೆಗಳಲ್ಲಿ ಶಾಲಾ ಶಿಕ್ಷಣದ ಬಗ್ಗೆ ಸಮುದಾಯದವರಲ್ಲಿ ಅರಿವು ಮೂಡಿಸಲು ‘ಗ್ರಾಮೋತ್ಸವ’ದಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಈ ಮೂಲಕ ಸಮುದಾಯದವರಲ್ಲಿ ಮಕ್ಕಳ ಕಲಿಕೆಯ ಬಗ್ಗೆ ಅರಿವು ಮೂಡಿಸಿ, ಸಮುದಾಯವನ್ನು ಶಾಲಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಇದರಿಂದ ಶಾಲೆಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸಲೂ ಸಾಧ್ಯವಾಯಿತು. ಒಂದನೇ ತರಗತಿಯ ಮಕ್ಕಳಲ್ಲಿ ಶಾಲೆಯ ಬಗ್ಗೆ ಆಸಕ್ತಿ ಕೆರಳಿಸಲು ಸ್ಪೂರ್ತಿದಾಯಕ ಚಟುವಟಿಕೆಗಳನ್ನು (ಮೊದಲ ಮೂರು ತಿಂಗಳು) ಆಯೋಜಿಸಲಾಯಿತು. ಈ ಚಟುವಟಿಕೆಗಳಿಂದ ಮಕ್ಕಳಲ್ಲಿ ಶಾಲೆ/ಶಿಕ್ಷಕರ ಬಗ್ಗೆ ಭಯ ಹೋಗಿ, ಒಂದನೇ ತರಗತಿಯ ಮಕ್ಕಳು ಶಾಲೆಯಿಂದ ಹೊರಗುಳಿಯುವುದು ಕಡಿಮೆಯಾಯಿತು. ಹಳ್ಳಿಯ ಸಮಾಜಿಕ – ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಅರಿತುಕೊಳ್ಳಲು ಹಳ್ಳಿಯ (ಮಕ್ಕಳು, ತಂದೆತಾಯಿಯರು, ಸಮುದಾಯದ) ಸಮೀಕ್ಷೆಯನ್ನು ನಡೆಸಬೇಕೆಂಬ ಸಲಹೆಯನ್ನೂ ಕೆಲ ಶಿಕ್ಷಕರು ನೀಡಿದರು. ಈ ವಿಶ್ಲೇಷಣೆಯನ್ನು ಆಧರಿಸಿ ಶಾಲೆಯಲ್ಲಿ ಸೂಕ್ತವಾದ ಚಟುವಟಿಕೆಗಳನ್ನು ವಿನ್ಯಾಸಗೊಳಿಸಬಹುದು. ಮಕ್ಕಳ ಬೆಳವಣಿಗೆ ಜೊತೆಜೊತೆಗೆ ಸಮುದಾಯದ ಬೆಳವಣಿಗೆಯೂ ತಮ್ಮ ಮುಖ್ಯ ಜವಾಬ್ದಾರಿ ಎನ್ನುವುದನ್ನು ಬಹಳಷ್ಟು ಶಿಕ್ಷಕರು ಕಂಡುಕೊಂಡಿದ್ದಾರೆ. ಮಕ್ಕಳು, ಪೋಷಕರು ಮತ್ತು ಸಮುದಾಯದೊಡನೆ ವ್ಯವಹರಿಸಲು ಅಗತ್ಯವಾದ ಅಂತರ್ವ್ಯಕ್ತೀಯ ಸಂಬಂಧದ ಕುಶಲತೆಯನ್ನು ಬೆಳೆಸಿಕೊಳ್ಳುವುದರಿಂದ ಹಲವಾರು ಸಮಸ್ಯೆಗಳು ಕಡಿಮೆಯಾಗಿ ಶಾಲೆ ಮುಂದುವರೆಯುವುದು ಸುಲಭವಾಗುತ್ತದೆ ಎಂದು ಶಿಕ್ಷಕರು ಹಂಚಿಕೊಂಡರು.

ಸಮಾನಾಂತರ ಅಧಿವೇಶನ – 3

ಹೆಣ್ಣು ಮಗುವಿನ ಶಿಕ್ಷಣ

ಹೆಣ್ಣು ಮಕ್ಕಳ ಶಿಕ್ಷಣವನ್ನು ಇನ್ನಷ್ಟು ಬಲಪಡಿಸಲು ಶಿಕ್ಷಕರು ತೆಗೆದು ಕೊಂಡಿರುವ ವಿವಿಧ ಕ್ರಮಗಳ ಬಗ್ಗೆ ಈ ಚರ್ಚೆ ನಡೆಯಿತು. ಇದರಲ್ಲಿರುವ ಸಮಸ್ಯೆಗಳು ಮತ್ತು ಅಡಚಣೆಗಳನ್ನು ಕಡಿಮೆಗೊಳಿಸುವಲ್ಲಿ ಶಿಕ್ಷಕರ ಕ್ರಮಗಳ ಬಗ್ಗೆ ಅನುಭವ ಹಂಚಿಕೊಂಡರು. ಬೆಳೆಯುತ್ತಿರುವ ಹೆಣ್ಣು ಮಕ್ಕಳ ಬಗ್ಗೆ ಸಮಾಜದಲ್ಲಿರುವ ನಂಬಿಕೆಗಳು, ಸಾಮಾಜಿಕ ಪದ್ಧತಿಗಳು ಮತ್ತು ಪಾಲಕರ ಆಚರಣೆಗಳ ಬಗ್ಗೆ ವಿಸ್ತೃತವಾಗಿ ಶಿಕ್ಷಕರು ಮಾತನಾಡಿದರು. ಹೆಣ್ಣುಮಕ್ಕಳು ಋತುಮತಿಗಳಾದ ನಂತರ ಶಾಲೆಗೆ ಕಳುಹಿಸಲು ಪಾಲಕರು ಇಷ್ಟ ಪಡುತ್ತಿರಲಿಲ್ಲ. ಕೆಲವು ಬಾರಿಯಂತೂ ಶಾಲೆಯಲ್ಲಿ ಕೊಡಲಾಗುವ ಪುಸ್ತಕ, ಬಟ್ಟೆ , ಸೈಕಲ್ ಮುಂತಾದುವನ್ನು ಪಡೆಯಲು ಹೆಣ್ಣು ಮಕ್ಕಳನ್ನು ಕಳುಹಿಸುತ್ತಿದ್ದರು. ನಂತರ ಶಾಲೆಗೆ ಅವರು ಹೋಗದಂತೆ ತಡೆಯುತ್ತಿದ್ದರು. ಈ ಕೆಲವು ಮಕ್ಕಳ ಕುಟುಂಬದೊಂದಿಗೆ ಮಾತನಾಡಿದ ನಂತರ ಇವರಲ್ಲಿ ಏಳು ಹೆಣ್ಣುಮಕ್ಕಳನ್ನು ಬಾಲಕಿಯರ ಶಾಲೆಗೆ ಕರೆದೊಯ್ದು ಸೇರಿಸಿದೆವು ಎಂದು ಒಂದು ಉದಾಹರಣೆಯನ್ನು ಕೊಟ್ಟರು. ಇವರಲ್ಲಿ ಹಲವರು ಸ್ನಾತಕೋತ್ತರ ಪದವಿಯವರೆಗೂ ಶಿಕ್ಷಣ ಮುಂದುವರೆಸಿದ್ದಾರೆ. ಹೆಣ್ಣು ಮಕ್ಕಳು 6ನೇ / 7ನೇ ತರಗತಿ ತಲುಪಿದ ನಂತರ ಶೈಕ್ಷಣಿಕ ಪ್ರವಾಸಗಳಿಗೆ ಕಳುಹಿಸಲು ತಂದೆತಾಯಿಯರು ಮುಜುಗರ ಪಟ್ಟುಕೊಳ್ಳುತ್ತಾರೆ. ಅವರಿಗೆ ತಮ್ಮ ಮಕ್ಕಳು ಸುರಕ್ಷಿತವಾಗಿರುತ್ತಾರೆಂಬ ಧೈರ್ಯ ತುಂಬುವುದೂ ಹಾಗೂ ಎಲ್ಲ ಮಕ್ಕಳೂ ಪ್ರವಾಸಗಳಿಗೆ ಬರುವಂತೆ ಮಾಡುವ ವಿಶ್ವಾಸ ಮೂಡಿಸುವುದು ಅಗತ್ಯ ಎಂದು ಶಿಕ್ಷಕರು ತಿಳಿಸಿದರು ಏಕೆಂದರೆ ಸ್ಪರ್ಧೆಯಲ್ಲಿ ಹೆಣ್ಣು ಮಕ್ಕಳ ಭಾವಚಿತ್ರಗಳನ್ನು ತೆಗೆದು ವಾಟ್ಸಾಪ್ಗಳಲ್ಲಿ ಹಂಚಿಕೊಳ್ಳುತ್ತಾರೆ ಎಂಬ ಕಾರಣದಿಂದ ಅವರನ್ನು ಸ್ಪರ್ಧೆಗಳಿಗೂ ಕಳುಹಿಸುವುದಿಲ್ಲ. ಶೈಕ್ಷಣಿಕ ಕಾರ್ಯಕ್ರಮಗಳ ಪ್ರಾಮುಖ್ಯತೆಯನ್ನು ತಿಳಿಸಲು ಪಾಲಕರೊಂದಿಗೆ ನಡೆಸಿದ ಸಂವಾದಗಳು ನೆರವಾದವು. ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಒಂದೇ ಕಡೆ ಕಲೆತು ಕುಳಿತುಕೊಳ್ಳುತ್ತಿರಲಿಲ್ಲ ಹಾಗಾಗಿ “ಒಳ್ಳೆಯಸ್ಪರ್ಶ“ ಮತ್ತು “ಕೆಟ್ಟಸ್ಪರ್ಶ“ ಇವುಗಳ ಬಗ್ಗೆ ಹೆಣ್ಣು ಮತ್ತು ಗಂಡು ಮಕ್ಕಳೊಂದಿಗೆ ಪ್ರತ್ಯೇಕವಾಗಿ ಚರ್ಚೆ ಮಾಡಲಾಯಿತು. ಈ ಕಾರ್ಯಕ್ರಮಗಳು ಯಾವುದು ಸರಿ, ಯಾವುದು ಸರಿಯಲ್ಲ ಎಂದು ತಿಳಿಯಲು ಸಹಾಯಕವಾದವು. ಅವರು ಅಕ್ಕ ಪಕ್ಕ ಕುಳಿತುಕೊಳ್ಳಲೂ ಮತ್ತು ಜೊತೆಗೂಡಿ ಆಟವಾಡಲು ಸಹಕಾರಿಯಾಯಿತು.

ಹೆಣ್ಣು ಮಕ್ಕಳು ಕೂದಲನ್ನು ಒಪ್ಪವಾಗಿರಿಸಿಕೊಳ್ಳುವುದು ಕಷ್ಟವಾದರೂ ಕೂಡಾ ಬಹಳಷ್ಟು ಗ್ರಾಮಗಳಲ್ಲಿ ಹೆಣ್ಣು ಮಕ್ಕಳ ಕೂದಲು ಕತ್ತರಿಸುವ ಬಗ್ಗೆ ಬಹಳ ಕಟ್ಟುನಿಟ್ಟಾದ ನಿಯಮಗಳಿವೆ. ಒಂದು ಶಾಲೆಯಲ್ಲಿ ಒಬ್ಬ ಶಿಕ್ಷಕರು ಮಕ್ಕಳು ಶಾಲೆಗೆ ಬೇಗ ಬರುವಂತೆ ಮಾಡಲು 5 ನೇ ತರಗತಿವರೆಗಿನ ಎಲ್ಲಾ ಹೆಣ್ಣು ಮಕ್ಕಳು ತಮ್ಮ ಕೂದಲನ್ನು ಕಿರಿದಾಗಿ ಕತ್ತರಿಸಿಕೊಳ್ಳಬೇಕೆಂದು ತಾಕೀತು ಮಾಡಿದರು. ಉದ್ದ ಕೂದಲು ಇದ್ದರೆ ಅದನ್ನು ಬಾಚಿ ಜಡೆ ಹಾಕಬೇಕಿತ್ತು ಇದಕ್ಕೆ ತಾಯಂದಿರಿಗೆ ಬೆಳಗ್ಗೆ ಸಮಯ ಸಾಲುತ್ತಿರಲಿಲ್ಲ ಆದ್ದರಿಂದ ಹುಡುಗಿಯರು ಶಾಲೆಗೆ ತಡವಾಗಿ ಬರುತ್ತಿದ್ದರು. ಆ ಶಿಕ್ಷಕರು ಹೆಣ್ಣುಮಕ್ಕಳಿಗೆ ತಾವೇ ಶಾಲೆಯಲ್ಲಿ ತಯಾರಾಗಲು ಸಹಾಯಕವಾಗುವಂತೆ ಹೇರ್ ಬ್ಯಾಂಡ್ ಗಳನ್ನು ಕನ್ನಡಿಯನ್ನೂ ಉಡುಗೊರೆಯಾಗಿ ನೀಡಿದರು. ಹೇರ್ ಬ್ಯಾಂಡ್ ಮತ್ತು ನಗದು ಬಹುಮಾನ ನೀಡುವುದರಿಂದ ಹಿಡಿದು ಹೀಗೆ ಹೊಸ ಹೊಸ ಚಿಂತನೆಗಳು, ಕೆಲಸಗಳ ಮೂಲಕ ಹೆಣ್ಣು ಮಕ್ಕಳು ಶಾಲೆಗೆ ಬರುವಂತೆ ಮಾಡಲು ಶಿಕ್ಷಣ ಮುಂದುವರಿಸಲು ಶಿಕ್ಷಕರು ನಿರಂತರವಾಗಿ ಹೊಸದನ್ನು ಯೋಚಿಸುತ್ತಿರಬೇಕಾಗುತ್ತದೆ ಎಂದು ಹೇಳಿದರು.

ಶಿಕ್ಷಕರು ತಿಳಿಸಿದ ಇನ್ನೊಂದು ವಿದಧ ಸಮಸ್ಯೆಯೆಂದರೆ ಸಮಾಜದಲ್ಲಿ ಗಂಡು ಮಕ್ಕಳ ಶಿಕ್ಷಣಕ್ಕೇ ಮೊದಲ ಆದ್ಯತೆ ಇರುವುದು. ಹೆಣ್ಣು ಮಕ್ಕಳನ್ನು ಸರ್ಕಾರೀ ಶಾಲೆಗೂ ಗಂಡು ಮಕ್ಕಳನ್ನು ಖಾಸಗೀ ಶಾಲೆಗೂ ಸೇರಿಸುವ ಪರಿಪಾಠವಿದೆ. ದೀರ್ಘ ರಜೆಯೋ ಇಲ್ಲವೇ ವಲಸೆಯಿಂದ ಬಂದ ನಂತರವೋ ನೋಡಿದರೆ ಹೆಣ್ಣು ಮಕ್ಕಳು ಮದುವೆಯಾಗಿಬಿಟ್ಟಿರುತ್ತಾರೆ ಹಾಗಾಗಿ ಶಾಲೆಗೆ ಅವರನ್ನು ಕಳುಹಿಸುವುದನ್ನು ನಿಲ್ಲಿಸಿ ಬಿಡುತ್ತಾರೆ. ಕೆಲವೊಮ್ಮೆ ಕುಟುಂಬಗಳು ವಲಸೆ ಹೋದರೂ ಎಳೆಯ ಮಕ್ಕಳನ್ನೋ ಇಲ್ಲ ವಯಸ್ಸಾದ ಅಜ್ಜಿ, ಅಜ್ಜಿಯರನ್ನೋ ನೋಡಿಕೊಳ್ಳಲು ಹೆಣ್ಣು ಮಕ್ಕಳನ್ನು ಬಿಟ್ಟು ಹೋಗುತ್ತಾರೆ. ಈ ಹೆಣ್ಣು ಮಕ್ಕಳು ಪುಟ್ಟ ತಮ್ಮ ತಂಗಿಯರನ್ನು ಶಾಲೆಗೆ ಕರೆ ತರಲು ಅನುವು ಮಾಡಿಕೊಟ್ಟದ್ದು ಅವರ ಹಾಜರಾತಿ ನಿಯಮಿತವಾಗಿರುವಂತೆ ಆಯಿತು ಎಂಬ ಅನುಭವವನ್ನೂ ಹಂಚಿಕೊಂಡರು. ದೇವದಾಸಿಯರ ಮಕ್ಕಳು ತಂದೆ ಹೆಸರು ತಿಳಿದಿಲ್ಲದೇ ಇರುವುದರಿಂದ ಬಹಳಷ್ಟು ಭಾವನಾತ್ಮಕ ವೇದನೆಗಳನ್ನು ಅನುಭವಿಸುತ್ತಾರೆ ಇಂತಹ ಮಕ್ಕಳಿಗೆ ಹೆಚ್ಚಿನ ಅನುಕಂಪ ಮತ್ತು ಅಕ್ಕರೆ ಅಗತ್ಯವಿದೆ. ಹೆಣ್ಣು ಮಕ್ಕಳ ಶಿಕ್ಷಣವನ್ನು ಮುಂದುವರಿಸಲು ಇರುವ ಸವಾಲು ಎದುರಿಸಲು ನಿರಂತರ ಪರಿಶ್ರಮದ ಅಗತ್ಯವಿದೆ ಎಂಬುದನ್ನು ಅವರು ಹೇಳಿದರು.
ಈ ಮೂರು ಬೇರೆ ಬೇರೆ ಗುಂಪು ಚರ್ಚೆಗಳ ನಂತರ ಸುಗಮಕಾರರು ಚರ್ಚೆಯ ಸಾರಾಂಶವನ್ನು ಎಲ್ಲರೊಂದಿಗೂ ಹಂಚಿಕೊಂಡರು. ಉಮಾಶಂಕರ ಪೆರಿಯೋಡಿಯವರು ತಮ್ಮ ಅನುಭವಗಳನ್ನು ಹಂಚಿಕೊಂಡ ಎಲ್ಲ ಭಾಗಿಗಳಿಗೆ ಆಭಾರ ಮನ್ನಣೆ ಸಮರ್ಪಿಸುವುದರೊಂದಿಗೆ ಕಾರ್ಯಕ್ರಮ ಸಂಜೆ 5:15ಕ್ಕೆ ಮುಗಿಯಿತು. ಈ ಎಲ್ಲ ಉತ್ತಮ ಕಥನಗಳನ್ನೂ ಬೇರೆ ಬೇರೆ ರೂಪದಲ್ಲಿ ಎಲ್ಲರೊಂದಿಗೆ ಹಂಚಿಕೊಂಡು ಇನ್ನೂ ಹೆಚ್ಚಿನ ಶಿಕ್ಷಕರಿಗೆ ಸ್ಪೂರ್ತಿ ದೊರೆಯುವಂತೆ ಮಾಡಲಾಗುವುದೆಂದೂ ಹೇಳಿದರು.

ಚಿತ್ರ 7: ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಚರ್ಚೆಯಲ್ಲಿ ಸಾರಾಂಶ ಹಂಚಿಕೊಳ್ಳುತ್ತಿರುವ ಸುಗಮಕಾರರು

ಹಿಮ್ಮಾಹಿತಿ

ಕಾರ್ಯಾಗಾರವು ವಿಷಯ ಮಂಡಿಸಿದವರು ಹಾಗು ಭಾಗವಹಿಸಿದವರಲ್ಲಿ ಗಮನಾರ್ಹ ಹುರುಪು ಉತ್ಸಾಹ ತುಂಬಿತು. ತಮ್ಮ ವೃತ್ತಿ ಬಾಂಧವರೊಂದಿಗೆ ಇದೇ ಮೊದಲ ಬಾರಿಗೆ ತಮ್ಮ ಸಾಧನೆ ಮತ್ತು ಅನುಭವಗಳನ್ನು ಹಂಚಿಕೊಳ್ಳುತ್ತಿದ್ದು ಈ ಅವಕಾಶ ಕಲ್ಪಿಸಿಕೊಟ್ಟದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದವರ ಕೆಲವು ಮುಖ್ಯ ಅನಿಸಿಕೆಗಳು ಹೀಗಿವೆ:

• ನಮ್ಮ ಜಿಲ್ಲೆಯಲ್ಲಿರುವ ಶಿಕ್ಷಕರೊಂದಿಗೆ ಮಾತನಾಡುವ ಅವಕಾಶ ಆಗಾಗ ಸಿಗುತ್ತದೆ. ಆದರೆ ಬೇರೆಯ ಜಿಲ್ಲೆಯ ಶಿಕ್ಷಕರ ಮಾತು ಕೇಳಲು ಅವಕಾಶ ಸಿಕ್ಕಿರುವುದು ಇದೇ ಮೊದಲು. ಇದನ್ನು ಮುಂದುವರಿಸುವುದು ಅಗತ್ಯ.
• ಇತರರ ಮಾತುಗಳನ್ನು ಕೇಳಿದಾಗ ನಾವು ಸಾಧಿಸಿರುವುದು ಬಹಳ ಕಡಿಮೆ, ಮಾಡುವ ಕೆಲಸ ಸಾಕಷ್ಟಿದೆ ಎಂಬ ಅರಿವಾಯಿತು.
• ಮನಸ್ಸು ಬದಲಾಯಿಸುವ ಬದಲಿಸುವ ಕಾರ್ಯಾಗಾರ
• ಸಫಲತೆಯ ಕಥನಗಳನ್ನು ಹೆಕ್ಕವುದೇ ದೊಡ್ಡ ಕೆಲಸ. ಶಿಕ್ಷಕರ ಕೆಲಸಗಳನ್ನು ಗುರುತಿಸಿರುವುದು ಅವರಲ್ಲಿ ಸ್ಪೂರ್ತಿಯನ್ನು ದ್ವಿಗುಣಗೊಳಿಸುವುದರ ಜೊತೆಗೆ ನಮಗೆ ಅಂತಹ ಕೆಲಸ ಮಾಡಲು ಸಿಕ್ಕಿರುವ ಹುರುಪೂ ದ್ವಿಗುಣವಾಗಿದೆ.
• ಅವರ ಕೆಲಸಗಳನ್ನು ನೀವು ಗುರುತಿಸಿ ಮನ್ನಣೆ ನೀಡಿದ್ದೀರಿ. ಅವರ ಮಾತುಗಳನ್ನು ಕೇಳಿದ ಮೇಲೆ ಅವರಂತೆಯೇ ನಾವು ಕೆಲಸ ಮಾಡಬೇಕೆಂಬ ಹುಮ್ಮಸ್ಸು ಉಂಟಾಗಿದೆ.
• ಕೆಲವೊಮ್ಮೆ ನಾವು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಎಂಬುದು ಮನದಟ್ಟಾಗುತ್ತದೆ. ಇನ್ನೂ ಕೆಲವು ಬಾರಿ ಅಷ್ಟೇ ನಿರಾಶೆಯೂ ಆಗುತ್ತದೆ. ಇತರರು ನಮ್ಮ ಕೆಲಸವನ್ನು ಗುರುತಿಸಿ ಮಾತನಾಡಿದಾಗ ನಮಗೆ ಮತ್ತೆ ಭರವಸೆ ಮೂಡುತ್ತದೆ.

ಚಿತ್ರ 8 : ಹಿಮ್ಮಾಹಿತಿ

ಶಿಕ್ಷಕರು ತಮ್ಮ ಉತ್ತಮ ಅನುಭವಗಳನ್ನು ಹಂಚಿಕೊಳ್ಳುವುದರೊಟ್ಟಿಗೇ ತಾವು ಎದುರಿಸುತ್ತಿರುವ ಸವಾಲುಗಳನ್ನೂ ದಿಟ್ಟವಾಗಿ ಹಂಚಿಕೊಂಡದ್ದು ನಿಜಕ್ಕೂ ಉತ್ತೇಜನಕಾರಿ. ಕೆಲವರು ಹಾಸ್ಯ ಭರಿತವಾಗಿಯೂ ಮಾತನಾಡಿದರು. ಚರ್ಚೆಯ ಕಾಲದಲ್ಲಿ ತಾವು ಏನು ಮಾತನಾಡಬೇಕು ಎಂದು ತಮಗೆ ಗೊತ್ತಾಗುತ್ತಿಲ್ಲ ಎಂದು ತಿಳಿಸಿದ್ದ ಕೆಲವು ಶಿಕ್ಷಕರೂ ವಾತಾವರಣ ಸ್ನೇಹಪೂರಿತವೂ ಮತ್ತು ಭಯರಹಿತವೂ ಆಗಿತ್ತು ಎಂದು ತಿಳಿಸಿದರು. ಕಾರ್ಯಾಗಾರ ವೇಗದ ಗತಿಯಲ್ಲಿ ಸಾಗದಿದ್ದರೂ ಶಿಕ್ಷಕರಿಗೆ ಅನುಭವ ಹಂಚಿಕೆಗೆ ಇನ್ನೂ ಹೆಚ್ಚು ಸಮಯ ಬೇಕೆನಿಸಿತು. ತಮ್ಮ ಕೆಲಸದ ಬಗ್ಗೆ ಅನುಭವ ಹಂಚಿಕೊಳ್ಳಿ ಎಂದು ಸಾಮಾನ್ಯವಾಗಿ ಹೇಳುವ ಬದಲು ಶಿಕ್ಷಕರಿಗೆ ಮುಂಚಿತವಾಗಿಯೇ ನಿರ್ದಿಷ್ಟ ಪ್ರಶ್ನೆಗಳನ್ನು ನೀಡಿದ್ದರೆ ಇನ್ನೂ ನಿರಾಳತೆಯಿಂದ ಮಾತನಾಡುತ್ತಿದ್ದರೇನೋ? ಭಾಗವಹಿಸಿದ ಎಲ್ಲ ಶಿಕ್ಷಕರೊಂದಿಗೂ ಕಥನಗಳ ಕನ್ನಡಾನುವಾದವನ್ನು ಒಂದು ವಾರ ಮುಂಚಿತವಾಗಿಯೇ ನೀಡಿದ್ದರೆ ಇನ್ನೂ ಸುಲಭವಾಗುತ್ತಿತ್ತು. ತಮ್ಮ ಅನುಭವಗಳು ದಾಖಲಾಗುವುದರೊಟ್ಟಿಗೆ ಪ್ರಕಟವೂ ಆಗಿರುವುದು ಶಿಕ್ಷಕರಿಗೆ ಅತೀವ ಸಂತಸ ನೀಡಿತು. ಅಜೀಂ ಪ್ರೇಮ್ ಜಿ ಶಾಲೆಯು ಇದಕ್ಕೆ ವೇದಿಕೆಯನ್ನೊದಗಿಸಿದ್ದು ಶಿಕ್ಷಣ ವ್ಯವಸ್ಥೆಯ ವಿವಿಧ ಅಂಗಗಳಾದ -ಶಿಕ್ಷಕರು, ಫೌಂಡೇಷನ್ ಮತ್ತು ವಿಶ್ವವಿದ್ಯಾಲಯದ ಸದಸ್ಯರ ಸಮ್ಮಿಳಿತವು ಸಂದರ್ಭೋಚಿತವಾಗಿತ್ತು.

ಮುಂದಿನ ಹೆಜ್ಜೆಗಳು

• ಭಾಗವಹಿಸಿದ ಎಲ್ಲ ಶಿಕ್ಷಕರೊಟ್ಟಿಗೆ ಮುಂದಿನ ಅನುಸರಣಾ ಕ್ರಮಗಳ ನಿರ್ದಿಷ್ಟ ಅಂಶಗಳನ್ನು ಗುರುತಿಸಬೇಕು ಮತ್ತು ಆ ಅನುಸರಣಾ ಕ್ರಮಗಳ ಯೋಜನೆಯನ್ನೂ ಸಿದ್ಧಪಡಿಸಬೇಕಾಗಿದೆ.

• ಇದೇ ಜಿಲ್ಲೆಗಳ ಹೆಚ್ಚಿನ ಶಿಕ್ಷಕರನ್ನು ಗುರುತಿಸಿ ಅವರ ಪ್ರಯತ್ನಗಳನ್ನು ಪ್ರತಿಫಲನಾತ್ಮಕವಾಗಿ ದಾಖಲಿಸಬೇಕು. ಕಾಲಾನುಕ್ರಮದಲ್ಲಿ ಕೆಲವು ಆಚರಣೆಗಳು ಅಥವಾ ಅವುಗಳ ಮಾದರಿಗಳನ್ನು ಹಿಡಿದಿಡಲು ಸಾಧ್ಯವಾಗಿಸಬಹುದು. ಇದರ ಸಹಾಯದಿಂದ ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ಒಟ್ಟಾರೆ ಉನ್ನತ ನೆಲೆಯ ಸೂಕ್ಷ್ಮ ವಿಶ್ಲೇಷಣೆ ಮಾಡುವುದು ಸಾಧ್ಯವಾಗಬಹುದು. ಅದರಿಂದ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದೊರಕುವಂತೆ ಮಾಡಲು ಧನಾತ್ಮಕ ನಿರ್ದೇಶನಗಳು ಗೋಚರಿಸಬಹುದು.

• ಹೆಣ್ಣು ಮಕ್ಕಳ ಶಿಕ್ಷಣವೇ ಅತೀ ದೊಡ್ಡ ಸವಾಲೆಂದು ಮಧ್ಯಾಹ್ನದ ಚರ್ಚೆಗಳಿಂದ ತಿಳಿದು ಬಂದಿತು. ಅವಕಾಶ ವಂಚಿತರಿಗೆ ಗುಣಮಟ್ಟದ ಶಿಕ್ಷಣ ಯೋಜನೆಯ ಸದಸ್ಯರು ಇತರ ಕಡೆಗಣಿತ ವರ್ಗಗಳ ಮಕ್ಕಳ ಶಿಕ್ಷಣದ ದತ್ತಾಂಶವನ್ನು ಅದರಲ್ಲೂ ಹೆಣ್ಣುಮಕ್ಕಳ ಬಗ್ಗೆ ವಿಶೇಷ ಗಮನ ನೀಡಿ ವಿಶ್ಲೇಷಣಾತ್ಮಕ ದಾಖಲೀಕರಣ ಮಾಡುವುದರ ಕುರಿತು ಆಲೋಚಿಸಬಹುದು.

• ಫೌಂಡೇಷನ್ ನ ಸದಸ್ಯರು ಮತ್ತು ವಿಶ್ವವಿದ್ಯಾಲಯದ ಬೋಧಕರ ಚಿಂತನೆಗಳಲ್ಲಿ ಸಾಕಷ್ಟು ಸಮಾನತೆ ಕಂಡು ಬಂದಿತು. ಇದನ್ನು ಹೆಚ್ಚು ಗಟ್ಟಿಗೊಳಿಸಿ ಒಗ್ಗೂಡಿ ಕೆಲಸ ಮಾಡುವುದು ಮತ್ತು ಒಟ್ಟಾಗಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಹುದಾಗಿದೆ.

• ಈ ಎಲ್ಲ ಕಥನಗಳ ಸಂಕಲನವನ್ನು ಅಂತಿಮವಾಗಿ ಕನ್ನಡದಲ್ಲಿ ಸಿದ್ದಪಡಿಸಿ ಅಚ್ಚುಮಾಡಿಸಿ ಒಂದು ಕಿರು ಹೊತ್ತಿಗೆಯನ್ನು ಪ್ರಕಟಿಸಿ ಹಂಚಬೇಕು. ಈ ಕಥನಗಳ ಸಂಕ್ಷಿಪ್ತ ಆವೃತ್ತಿ ಅಗತ್ಯವೆನಿಸಿದರೆ ಅದರ ಸಂಪಾದನೆಗೂ ಅಗತ್ಯ ಯೋಜನೆಯನ್ನು ಮಾಡಬೇಕು.

ಈ ಅನುಭವ ಹಂಚಿಕೆ ಕಾರ್ಯಾಗಾರಕ್ಕೆ ಸಹಾಯ ಮಾಡಿದ ಎಲ್ಲ ತಂಡಗಳ ಸದಸ್ಯರಿಗೂ ನಾವು ಆಭಾರಿಗಳಾಗಿದ್ದೇವೆ. ವಿವಿಧ ಶಾಲೆಗಳಿಂದ ಬಂದು ಕಾರ್ಯಾಗಾರವನ್ನು ಯಶಸ್ವಿಯಾಗಿಸಿದ ಎಲ್ಲ ಶಿಕ್ಷಕರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ.

ಒಳಗೊಳ್ಳುವ ಸಮಾಜಕ್ಕೆ ಶಿಕ್ಷಕರನ್ನು ಅಭಿವೃದ್ಧಿಪಡಿಸುವ ಸಹಕಾರಾತ್ಮಕ ಪ್ರಯತ್ನ

 

Print Friendly, PDF & Email

1 comment on “ಅವಕಾಶವಂಚಿತರಿಗೆ ಗುಣಮಟ್ಟದ ಶಾಲಾ ಶಿಕ್ಷಣ – ಒಳಗೊಳ್ಳುವ ಸಮಾಜಕ್ಕಾಗಿ ಶಿಕ್ಷಕರು

Leave a Reply

Your email address will not be published.

Scroll to top