Teachers for Inclusive Society

ಶಾಲೆ ಮತ್ತು ಸಮುದಾಯದ ನಡುವಿನ ಸೌಹಾರ್ದಯುತ ಸೇತುವೆಯಾದ ಶಿಕ್ಷಕ

ಪುಟ್ಟಹಳ್ಳಿ ಈರೇಗೌಡನ ಕೊಪ್ಪಲಿನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಪಾಂಡವಪುರ ತಾಲೂಕಿನ ವ್ಯಾಪ್ತಿಯಲ್ಲಿರುವ ಶಾಲೆಯಾಗಿದ್ದು, ಈ ಹಳ್ಳಿಯು ತಾಲೂಕು ಕೇಂದ್ರದಿಂದ 25 ಕಿ.ಮೀ ಗಳ ಅಂತರದಲ್ಲಿದೆ.

Print Friendly, PDF & Email

ಶಾಲೆ ಮತ್ತು ಸಮುದಾಯದ ನಡುವಿನ ಸೌಹಾರ್ದಯುತ ಸೇತುವೆಯಾದ ಶಿಕ್ಷಕ

ಶಿಕ್ಷಕರು – ವೆಂಕಟೇಶ್ ಡಿ.ಎಸ್.
ಶಾಲೆ – ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಈರೇಗೌಡನ ಕೊಪ್ಪಲು, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ (ದಕ್ಷಿಣ ಕರ್ನಾಟಕ)

ಲೇಖಕಿ: ಹೇಮಲತ .ಎಂ.

ಪುಟ್ಟಹಳ್ಳಿ ಈರೇಗೌಡನ ಕೊಪ್ಪಲಿನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಪಾಂಡವಪುರ ತಾಲೂಕಿನ ವ್ಯಾಪ್ತಿಯಲ್ಲಿರುವ ಶಾಲೆಯಾಗಿದ್ದು, ಈ ಹಳ್ಳಿಯು ತಾಲೂಕು ಕೇಂದ್ರದಿಂದ 25 ಕಿ.ಮೀ ಗಳ ಅಂತರದಲ್ಲಿದೆ. ಈ ಹಳ್ಳಿಯಲ್ಲಿ ಒಟ್ಟು ಜನಸಂಖ್ಯೆ 410 ಆಗಿದ್ದು, ಸುಮಾರು 85 ಕುಟುಂಬಗಳು ವಾಸವಾಗಿವೆ. ಇಲ್ಲಿನ ಗ್ರಾಮಸ್ಥರೆಲ್ಲರು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ಬಡತನ ರೇಖೆಯ ಕೆಳಗಿನವರಾಗಿರುತ್ತಾರೆ. ಇದೊಂದು ಕೊಪ್ಪಲಾಗಿದ್ದು, ಇಲ್ಲೊಂದು ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ, ಹಾಲಿನ ಡೈರಿ ಮತ್ತು ಒಂದು ಭೈರವೇಶ್ವರ ದೇವಸ್ಥಾನವಿದೆ. ಈ ಕೊಪ್ಪಲಿಗೆ ಸರ್ಕಾರಿ ಸಾರಿಗೆ ವ್ಯವಸ್ಥೆಯ ಸೌಕರ್ಯವಿರದೆ, ಇಲ್ಲಿನ ಗ್ರಾಮಸ್ಥರು ದಿನನಿತ್ಯ ಓಡಾಟಕ್ಕೆ ಸ್ಥಳೀಯ ಆಟೋಗಳನ್ನು ಅವಲಂಬಿಸಿರುತ್ತಾರೆ. ಕೆಲವರು ಸ್ವಂತ ಮೋಟಾರು ಸೈಕಲನ್ನು ಹೊಂದಿರುವುದು ಕಂಡು ಬಂದಿದೆ. ಇವರ ಮುಖ್ಯ ಕಸುಬು ವ್ಯವಸಾಯವಾಗಿದ್ದು ಇದರಲ್ಲಿ ರೇಷ್ಮೆ ಬೆಳೆ, ಹೂ ಬೇಸಾಯ, ಪಶುಸಂಗೋಪನೆ ಮಾಡುತ್ತಿದ್ದು, ಹಲವರು ದಿನಗೂಲಿ ನೌಕರರಾಗಿ ಸಹ ಕೆಲಸ ಮಾಡುತ್ತಿದ್ದಾರೆ. ಈ ಹಳ್ಳಿಯ ವೈಶಿಷ್ಟ್ಯವೆಂದರೆ ಶಾಲೆ ಮತ್ತು ಭೈರವೇಶ್ವರ ದೇವಸ್ಥಾನವು 10 ಅಡಿ ಅಂತರದಲ್ಲಿ ಎದುರುಬದಿರಾಗಿವೆ. ದೇವಸ್ಥಾನಕ್ಕೆ ಬಂದ ಗ್ರಾಮಸ್ಥರು ದೇವಸ್ಥಾನಕ್ಕೆ ನಮಸ್ಕರಿಸಿ ಶಾಲೆಗೂ ನಮಸ್ಕರಿಸುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಇದಲ್ಲದೆ ಶಾಲಾ ವಾರ್ಷಿಕೋತ್ಸವ ಮತ್ತು ದೇವಸ್ಥಾನದ ವಾರ್ಷಿಕೋತ್ಸವವನ್ನು ಒಂದೇ ದಿವಸ ಆಚರಿಸುತ್ತಾರೆ.

ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ 1980ರಲ್ಲಿ ಪ್ರಾರಂಭಗೊಂಡಿದ್ದು, ಆರಂಭಿಕ ಹಂತದಲ್ಲಿ ಎರಡು ಕೊಠಡಿಗಳು ಹೊಂದಿದ್ದು, ಪ್ರಸ್ತುತ ಮತ್ತೊಂದು ಸಣ್ಣ ತರಗತಿ ಹಾಗೂ ಸಣ್ಣದಾದ ಒಂದು ರಂಗಮಂಟಪವನ್ನು ನಿರ್ಮಿಸಲಾಗಿದೆ. ಮೂಲಭೂತ ಸೌಕರ್ಯಗಳಾದ ಶುದ್ಧಕುಡಿಯುವ ನೀರು, ಶೌಚಾಲಯ, ಮಧ್ಯಾಹ್ನದ ಬಿಸಿಊಟ ತಯಾರಿಸಲು ಅಡುಗೆ ಕೋಣೆ, ವಿದ್ಯುಚ್ಛಕ್ತಿ ಹಾಗೂ ಶಾಲೆಗೆ ಸುತ್ತುಗೋಡೆ ಇರುತ್ತದೆ. ಶಾಲೆಯ ಮುಂಭಾಗದಲ್ಲಿ ಶಾರದಾಂಬೆಯ ಪ್ರತಿಮೆಯಿದ್ದು, ಶಾಲೆಗೆ ಮಕ್ಕಳು ಒಳಬರುವಾಗ ದೇವರಿಗೆ ಕೈ ಮುಗಿದು ಒಳಬರುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಶಾಲೆಯಲ್ಲಿ ಒಟ್ಟು 34 ವಿದ್ಯಾರ್ಥಿಗಳಿದ್ದು ಇವರಲ್ಲಿ30 ವಿದ್ಯಾರ್ಥಿಗಳು ಇದೇ ಹಳ್ಳಿಯಿಂದ ಬರುತ್ತಿದ್ದು ಉಳಿದ ನಾಲ್ಕು ವಿದ್ಯಾರ್ಥಿಗಳು ಹತ್ತಿರದ ಹಳ್ಳಿಯಿಂದ ಬಂದು ಅಭ್ಯಾಸ ಮಾಡುತ್ತಿದ್ದಾರೆ.

ವೆಂಕಟೇಶ್ .ಡಿ.ಎಸ್. ಅವರು ಕೆರಗೋಡಿನಲ್ಲಿ 1998ರಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದಿದ್ದು ,2007ರಲ್ಲಿ ಕೇಂದ್ರೀಯ ದಾಖಲಾತಿ ಘಟಕವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 4ನೆ ಸ್ಥಾನ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಇವರು ದಿನಾಂಕ 8.7.2008ರಲ್ಲಿ ಇದೇ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ತಮ್ಮ ಶಿಕ್ಷಕ ವೃತ್ತಿ ಜೀವನ ಪ್ರಾರಂಭಿಸಿ 2012ರಿಂದ ಪ್ರಭಾರಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರ ಬದುಕಿನಲ್ಲಿ ಬದಲಾವಣೆ ಸಮಯ

ಈ ಶಿಕ್ಷಕರು ತಮ್ಮ ಸಹೋದರರ ಆರ್ಥಿಕ ಸಹಾಯದಿಂದ ಶಿಕ್ಷಕ ತರಬೇತಿ ಪಡೆದು, ತರಬೇತಿಯ ನಂತರ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಳ್ಳದೆ ತಮ್ಮ ಸಹೋದರರ ಆಶಯದಂತೆ ವ್ಯಾಪಾರದಲ್ಲಿ ತೊಡಗಿಸಿಕೊಂಡರು. ಇದರೊಂದಿಗೆ ಕ..ವೇಯ ಸಕ್ರಿಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದರು. ಜೊತೆಗೆ ಗಣಪತಿ ಹಬ್ಬದಲ್ಲಿ ಪಾಲ್ಗೊಳ್ಳುವುದು, ಪೌರಾಣಿಕ ನಾಟಕಗಳಲ್ಲಿ ಪಾತ್ರವಹಿಸುವುದರಲ್ಲಿ ಆಸಕ್ತಿ ತೋರಿರುತ್ತಾರೆ. ಇವರ ವೈವಾಹಿಕ ಜೀವನ ಇದೇ ಸಮಯದಲ್ಲಿ ಪ್ರಾರಂಭವಾಯಿತು. ಇವರ ವೈಯಕ್ತಿಕ ಬದುಕಿನಲ್ಲಿ ಎರಡು ಪುಟ್ಟ ಕಂದಮ್ಮಗಳ ಅಕಾಲಿಕ ಮರಣವು ಇವರ ಮನಸ್ಥಿತಿಯ ಮೇಲೆ ಪರಿಣಾಮ ಬೀರಿ ಸಮಾಜದ ಜೊತೆ ಇರಬೇಕೆಂದುಕೊಂಡುದು ಇವರ ಜೀವನದಲ್ಲಿ ಪ್ರಮುಖ ಬಲಾವಣೆಯ ಸಮಯವಾಗಿರುತ್ತದೆ. ಈ ಹಂತದಲ್ಲಿ ಇವರು ಶಿಕ್ಷಕ ವೃತ್ತಿಯನ್ನು ಆರಿಸಿ, ಸತತ ಪರಿಶ್ರಮದಿಂದ ನೇಮಕಗೊಂಡು ಈ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ವೃತ್ತಿ ಪ್ರಾರಂಭಿಸಿ ಪ್ರಸ್ತುತ ಪ್ರಭಾರಿ ಮುಖ್ಯ ಶಿಕ್ಷಕರಾಗಿ ಮುಂದುವರೆದಿರುತ್ತಾರೆ..

ಎದುರಾದ ಸವಾಲುಗಳು :

ವೆಂಕಟೇಶ್ .ಡಿ.ಎಸ್ ಅವರು ಶಾಲೆಯಲ್ಲಿ ವೃತ್ತಿಜೀವನ ಆರಂಭಿಸಿದ ಆರಂಭದ ದಿನಗಳಲ್ಲಿ ಶಾಲೆಯಲ್ಲಿ ಎಲ್ಲವೂ ಸರಿಯಿರಲಿಲ್ಲ. ಮುಖ್ಯವಾಗಿ ಕೆಳಗಿನ ಸವಾಲುಗಳನ್ನು ಎದುರಿಸುವ ಸಂದರ್ಭ ಉಂಟಾಯಿತೆಂದು ಮುಕ್ತವಾಗಿ ಹೇಳಿರುತ್ತಾರೆ.

ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ.

ಶಿಕ್ಷಕರುಗಳ ನಡುವೆ ಇದ್ದ ಅಸಹಕಾರ ಮತ್ತು ಸಂಘರ್ಷ

ಸಮುದಾಯದವರು(ಗ್ರಾಮಸ್ಥರು) ಶಾಲೆಯ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿಲ್ಲದಿರುವುದು.

ಶಾಲಾ ಮಕ್ಕಳಲ್ಲಿ ಮತ್ತು ಶಾಲೆಯಲ್ಲಿನ ಸ್ವಚ್ಛತೆಯ ಸಮಸ್ಯೆ.

5ನೆಯ ತರಗತಿ ತೇರ್ಗಡೆ ಹೊಂದಿದ ಮಕ್ಕಳು ಮಾಧ್ಯಮಿಕ ಶಾಲೆಯಲ್ಲಿ ಅಭ್ಯಾಸ ಮಾಡಲು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಸತಿನಿಲಯವನ್ನು ಅವಲಂಬಿಸುತ್ತಿದ್ದುದು. ಅವಕಾಶ ವಂಚಿತರಾದರೆ ಶಾಲಾ ಶಿಕ್ಷಣವನ್ನೆ ಬಿಡುವುದು.

ಶಾಲೆಯ ಪಡಸಾಲೆಯನ್ನು ಜೂಜು ಕಟ್ಟೆಗಳಾಗಿ ಉಪಯೋಗಿಸುತ್ತಿದ್ದುದು.

ಮೃತರ ಶವಗಳನ್ನು ಶವಸಂಸ್ಕಾರಕ್ಕೆ ಮುಂಚೆ ಶಾಲೆಯ ಮುಂದೆ ಇಡುವ ವಾಡಿಕೆ.

ಯಶಸ್ಸಿನ ಕಥೆ:

ವೆಂಕಟೇಶ್ .ಡಿ.ಎಸ್. ಅವರು ಶಾಲೆಯಲ್ಲಿ ವೃತ್ತಿ ಪ್ರಾರಂಭಿಸಿದಾಗ ಶಾಲೆಯಲ್ಲಿ ಎಲ್ಲವೂ ಸರಿಯಿಲ್ಲವೆಂಬುವುದು ಮೇಲಿನ ಅಂಶಗಳ ಮೂಲಕ ಅರ್ಥ ಮಾಡಿಕೊಂಡರು. ಈ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸುಮಾರು ಒಂದು ವರ್ಷದವರೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದರು. ಸಹಾಯಕ ಶಿಕ್ಷಕರಾಗಿದ್ದುದರಿಂದ ಈ ಸಮಸ್ಯೆಗಳನ್ನು ನೇರವಾಗಿ ತಾವೇ ಪರಿಹರಿಸಲು ಅವಕಾಶವಿಲ್ಲದೆ ಪರಿತಪಿಸಿ ದಿನಗಳನ್ನು ಕಳೆದರು. ತದನಂತರ 2012 ರಿಂದ ಈ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸಲು ತಕ್ಕ ಮಾರ್ಗೋಪಾಯಗಳನ್ನು ಕಂಡುಹಿಡಿಯುವಲ್ಲಿ ಅತ್ಯಂತ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಪ್ರಯತ್ನಿಸಿರುವುದು ಪ್ರಶಂಸನೀಯ.

ಅನುಸರಿಸಿದ ಮಾರ್ಗೋಪಾಯಗಳು

ವೆಂಕಟೇಶ್ .ಡಿ.ಎಸ್. ಅವರು ಶಾಲೆಯಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದಾಗಿನಿಂದ ವಿದ್ಯಾರ್ಥಿಗಳಿಗೆ ಚಟುವಟಿಕೆಗಳ ಮೂಲಕ ಕಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ವಿದ್ಯಾರ್ಥಿಗಳು ಸಕ್ರಿಯವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪೂರಕವಾದ ಕಲಿಕಾ ಸನ್ನಿವೇಶಗಳನ್ನು ಒದಗಿಸುತ್ತಿದ್ದಾರೆ. ಇವರ ಈ ರೀತಿಯ ಚಟುವಟಿಕೆಗಳ ಮೂಲಕ ಬೋಧಿಸುವ ರೀತಿಯನ್ನು ಶಾಲೆಯ ಮುಖ್ಯಶಿಕ್ಷಕರು ಸೂಕ್ಷ್ಮವಾಗಿ ಗಮನಿಸಿ, ಇವರಿಗೆ 2009ರಲ್ಲಿ ನಲಿಕಲಿ ವಿಧಾನದ ತರಬೇತಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದರು. ಇಂದು ವೆಂಕಟೇಶ್ .ಡಿ.ಎಸ್ ಅವರು ಉತ್ತಮ ನಲಿಕಲಿ ಶಿಕ್ಷಕರೆಂದು ಸಹ ಪ್ರಸಿದ್ಧಿಯಾಗಿರುತ್ತಾರೆ ಮತ್ತು ನಲಿಕಲಿ ತರಬೇತಿಯಲ್ಲಿ ಕಲಿತದ್ದನ್ನು ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ವಿದ್ಯಾರ್ಥಿಗಳ ಭಾಷಾಕಲಿಕೆಗೆ ಹೆಚ್ಚಿನ ಆದ್ಯತೆ ನೀಡಿ ಮಕ್ಕಳ ಸಂಭಾಷಣಾ ಕೌಶಲ್ಯದ ಬೆಳವಣಿಗೆಗೆ ಹಾಗೂ ಮಕ್ಕಳ ಸಾಮಾನ್ಯ ಜ್ಞಾನದ ಅಭಿವೃದ್ಧಿಗೆ, ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವುದು, ಕಲಿಕೋಪಕರಣಗಳನ್ನು ಸಿದ್ಧಪಡಿಸುವುದಕ್ಕೂ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಈ ರೀತಿಯ ಚಟುವಟಿಕೆಯ ಬೋಧನೆಯಿಂದ ಇವರು ಮಕ್ಕಳ ಮನಸ್ಸನ್ನು ಸೆಳೆದಿದ್ದು ಇದರಿಂದ ಸಮುದಾಯದವರು ಸಹ ಇವರನ್ನು ಅಭಿಮಾನದಿಂದ ಪ್ರಶಂಸಿಸಿರುತ್ತಾರೆ.

ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕರು ಬೇರೆ ಶಾಲೆಗೆ 2012ರಲ್ಲಿ ವರ್ಗಾವಣೆ ಮಾಡಿಸಿಕೊಂಡಿದ್ದರಿಂದ, ವೆಂಕಟೇಶ್‍ರವರು ಪ್ರಭಾರಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುವ ಅವಕಾಶ ದೊರೆತಿರುತ್ತದೆ.

ಎಸ್‍ಡಿಎಮ್‍ಸಿ ಮತ್ತು ಗ್ರಾಮಸ್ಥರೊಡನೆ ಆತ್ಮೀಯತೆ:

ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಗ್ರಾಮಸ್ಥರನ್ನು ಶಾಲೆಯ ಕಡೆಗೆ ಗಮನ ಹರಿಸುವಂತೆ ಮಾಡಲು ವೆಂಕಟೇಶ್ ಡಿ.ಎಸ್. ಅವರು ಇಟ್ಟ ಮೊದಲ ಹೆಜ್ಜೆಯೆಂದರೆ, ಗ್ರಾಮಸ್ಥರೊಡನೆ ಆತ್ಮೀಯತೆ ಬೆಳೆಸಿಕೊಳ್ಳುವುದು. ಇವರು ಉತ್ತಮ ಕಲಿಕಾ ವಾತಾವರಣವನ್ನು ಸೃಷ್ಟಿಸಿ ಚಟುವಟಿಕೆಗಳ ಮೂಲಕ ಬೋಧಿಸಿ 2009ರಲ್ಲಿ ವಿದ್ಯಾರ್ಥಿಗಳು ನವೋದಯ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಪ್ರವೇಶ ಪಡೆಯಲು ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಮೊದಲ ನಾಲ್ಕು ಶ್ರೇಣಿ (Rank)ಗಳನ್ನು ಪಡೆದಾಗ, ಗ್ರಾಮಸ್ಥರು ತಮ್ಮ ಅಭಿಮಾನವನ್ನು ವ್ಯಕ್ತಪಡಿಸುವುದರ ಮೂಲಕ ಶಾಲೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಇದಾದ ನಂತರ ಶಾಲೆಯಲ್ಲಿ ಆಚರಿಸುವ ರಾಷ್ಟ್ರೀಯ ಹಬ್ಬಗಳು, ನಾಡಹಬ್ಬಗಳಲ್ಲಿ ಗ್ರಾಮಸ್ಥರು ಭಾಗವಹಿಸುವುದರ ಮೂಲಕ ಶಾಲೆಯೊಡನೆ ಅವರ ಆತ್ಮೀಯತೆ ಬೆಳೆದಿದೆ. ಜೊತೆಗೆ ಶಿಕ್ಷಕರೂ ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಈ ಆತ್ಮೀಯತೆಗೆ ನೀರೆರೆದಿದೆ. ಇದೇ ಸಂದರ್ಭವನ್ನು ವೆಂಕಟೇಶ್ ಡಿ.ಎಸ್. ಅವರು ಉಪಯೋಗಿಸಿಕೊಂಡು ಶಾಲೆಯ ಎಸ್‍ಡಿಎಮ್‍ಸಿಯನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ಸದಸ್ಯರಿಗೆ ಎಸ್‍ಡಿಎಮ್‍ಸಿಯ ಅರ್ಥ, ಪ್ರಾಮುಖ್ಯತೆ ಮತ್ತು ಅದರ ಕರ್ತವ್ಯವನ್ನು ಮನಮುಟ್ಟುವಂತೆ ವಿವರಿಸಿ ಹೇಳಿ ಅವರೆಲ್ಲರೂ ಶಾಲಾಭಿವೃದ್ಧಿಗೆ ಅಭಿಮಾನದಿಂದ, ಶ್ರದ್ಧೆಯಿಂದ ಕೈಜೋಡಿಸುವಂತೆ ಪ್ರೇರೇಪಣೆ ಮಾಡಿರುತ್ತಾರೆ. ಪ್ರಸ್ತುತ ಎಸ್‍ಡಿಎಮ್‍ಸಿ ಸದಸ್ಯರೆಲ್ಲರೂ ಅಧಿಕಾರದ ಜೊತೆಗೆ ಅವರ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುವಂತೆ ಪ್ರೇರೇಪಿತರಾಗಿದ್ದು, ಶಾಲೆಯ ಆಡಳಿತದಲ್ಲಿ ಶಿಕ್ಷಕರು ಮತ್ತು ಎಸ್‍ಡಿಎಮ್‍ಸಿ ಸದಸ್ಯರೆಲ್ಲರೂ ಪಾರದರ್ಶಕತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಎಸ್‍ಡಿಎಮ್‍ಸಿ ಸಭೆಗಳಲ್ಲಿ ಗ್ರಾಮಸ್ಥರು ಸಹ ಭಾಗವಹಿಸುವ ಮುಕ್ತ ವಾತಾವರಣವನ್ನು ಕಾಣಬಹುದಾಗಿದೆ. ವೆಂಕಟೇಶ್ ಡಿ.ಎಸ್. ಅವರು ಎಸ್‍ಡಿಎಮ್‍ಸಿ ಸದಸ್ಯರು ಮತ್ತು ಉಳಿದ ಗ್ರಾಮಸ್ಥರನ್ನು ನಗುಮುಖದಿಂದ ಹಾಗೂ ಗೌರವದಿಂದ ಶಾಲೆಗೆ ಬರಮಾಡಿಕೊಳ್ಲುವುದು ಅತ್ಯಂತ ಪ್ರಶಂಸನೀಯವೆಂದು ಎಸ್‍ಡಿಎಮ್‍ಸಿ ಸದಸ್ಯರು ವ್ಯಕ್ತಪಡಿಸಿದ್ದಾರೆ. ಇಂತಹ ಸಭೆಗಳಲ್ಲಿ ಮತ್ತು ಶಾಲೆಯಲ್ಲಿ ಆಚರಿಸುವ ರಾಷ್ಟ್ರೀಯ ಹಾಗೂ ನಾಡಹಬ್ಬಗಳಲ್ಲಿ, ಶಾಲಾ ವಾರ್ಷಿಕೋತ್ಸವಗಳಲ್ಲಿ ಗ್ರಾಮಸ್ಥರಿಗೆ ಜ್ಞಾನ ತುಂಬುವ ಅವಕಾಶವನ್ನು ಕಲ್ಪಿಸಿ ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿಯನ್ನು, ಶಾಲಾ ಕಾರ್ಯಕ್ರಮಗಳ ಪ್ರಾಮುಖ್ಯತೆ ಮತ್ತು ಆಚರಣೆಯ ರೀತಿನೀತಿಗಳನ್ನು ತಿಳಿಯಲು ಸಹ ಅವಕಾಶ ಕಲ್ಪಿಸಲಾಗುತ್ತದೆ.

ಪ್ರತಿವರ್ಷ ತಾವು ಸೇವೆಗೆ ಸೇರಿದ ದಿನದ ವಾರ್ಷಿಕೋತ್ಸವವನ್ನು ವಿನೂತನ ರೀತಿಯಲ್ಲಿ ಆಚರಿಸುವ ಇವರು ಗ್ರಾಮದ ಮುಖ್ಯಸ್ಥರು ಮತ್ತು ಎಸ್.ಡಿ.ಎಂ.ಸಿ ಸದಸ್ಯರಿಗೆ ಭೋಜನವನ್ನು ಏರ್ಪಡಿಸಿ ಅವರೊಂದಿಗೆ ಸಂತಸವನ್ನು ಹಂಚಿಕೊಳ್ಳುವ ಪದ್ಧತಿಯನ್ನು ಬೆಳೆಸಿಕೊಂಡಿರುತ್ತಾರೆ.

ಮೋರಾರ್ಜಿ ದೇಸಾಯಿ ಮತ್ತು ನವೋದಯ ಶಾಲೆಗಳಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸಲು ಮಾಡಿರುವ ಪ್ರಯತ್ನ:

ಈ ಕೊಪ್ಪಲಿನಲ್ಲಿ ವಿದ್ಯಾರ್ಥಿಗಳಿಗೆ 5ನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುವ ಅವಕಾಶವಿದ್ದು, ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಹಿಂದುಳಿದ ವರ್ಗಗಳ ವಸತಿನಿಲಯವಿರುವ ಸ್ಥಳಗಳನ್ನಾರಿಸಿ ಹೋಗುವ ಅವಕಾಶವನ್ನು ಗ್ರಾಮಸ್ಥರು ಅನುಸರಿಸುತ್ತಿರುವುದನ್ನು ಮನಗಂಡ ಶಿಕ್ಷಕರು 5ನೆಯ ತರಗತಿಯ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿಯನ್ನು ನೀಡಲು ನಿರ್ಧರಿಸಿ ಇವರಿಗೆ ಉಚಿತವಾಗಿ ಮಾನಸಿಕ ಸಾಮರ್ಥ್ಯ, ಸಾಮಾನ್ಯ ಜ್ಞಾನ ಮತ್ತು ಸಂವಹನ ಕೌಶಲಗಳ ಬಗ್ಗೆ ಅಗತ್ಯ ತರಬೇತಿಯನ್ನು ಚಟುವಟಿಕೆಗಳ ಮೂಲಕ ನೀಡಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಆತ್ಮವಿಶ್ವಾಸವನ್ನು ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. 2009ರಿಂದ ಸತತವಾಗಿ ಪ್ರತಿ ವರ್ಷವೂ ವಿದ್ಯಾರ್ಥಿಗಳು ಉತ್ತಮವಾಗಿ ಉತ್ತರಿಸಿ ಮುರಾರ್ಜಿ ಶಾಲೆಯಲ್ಲಿ ಮತ್ತು ನವೋದಯ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಹೊಂದಿ ವಿದ್ಯಾಭ್ಯಾಸ ಮುಂದುವರಿಸಿರುತ್ತಾರೆ. ಈ ರೀತಿಯ ಇವರ ಪ್ರಯತ್ನ ಗ್ರಾಮಸ್ಥರು ಶಾಲೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಲು ಸಹಾಯಕವಾಗಿರುತ್ತದೆ.

ಶಾಲೆಯ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ನಡೆಸಿರುವ ಪ್ರಯತ್ನ

2008 ರಲ್ಲಿ ಶಾಲೆಯಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಇದು ಎರಡು ಕೊಠಡಿಗಳನ್ನು ಮಾತ್ರ ಹೊಂದಿತ್ತು. ತದನಂತರ ಹಂತ ಹಂತವಾಗಿ ಎಸ್‍ಡಿಎಮ್‍ಸಿ ಮತ್ತು ಗ್ರಾಮಸ್ಥರ ನೆರವಿನಿಂದ ಒಂದು ಹೆಚ್ಚುವರಿ ಕೊಠಡಿಯನ್ನು ನಿರ್ಮಿಸಲಾಗಿದೆ. ಇದಲ್ಲದೆ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ಫಿಲ್ಟರ್ ಹಾಕಿಸಲಾಗಿದ್ದು, ಇದರೊಂದಿಗೆ ವಿದ್ಯಚ್ಛಕ್ತಿ ಸೌಲಭ್ಯ, ಶೌಚಾಲಯದ ವ್ಯವಸ್ಥೆಯನ್ನು ಹಾಗೂ ಮಧ್ಯಾಹ್ನದ ಬಿಸಿ ಊಟವನ್ನು ತಯಾರಿಸಲು ಪ್ರತ್ಯೇಕ ಕೊಠಡಿಯನ್ನು ನಿರ್ಮಿಸಲಾಗಿದೆ.

ವೆಂಕಟೇಶ್ ಡಿ.ಎಸ್. ಅವರ ಸ್ನೇಹಿತರೊಬ್ಬರು ಪಾಂಡವಪುರದಲ್ಲಿ ಹೊಸಮನೆ ನಿರ್ಮಿಸಲು ನಿರ್ಧರಿಸಿ ತಮ್ಮ ಹಳೆ ಮನೆಯನ್ನು ಕೆಡವಲು ಮುಂದಾದಾಗ, ಅದರ ಕೆಲವು ಹಳೆಯ ವಸ್ತುಗಳನ್ನು ಶಾಲೆಗೆ ಸಾಗಿಸಿ ಗ್ರಾಮಸ್ಥರ ನೆರವಿನಿಂದ ಒಂದು ಸಣ್ಣ ರಂಗಮಂದಿರವನ್ನು ನಿರ್ಮಿಸಲಾಗಿದೆ. ಈ ವೇದಿಕೆಯನ್ನು ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರದರ್ಶಿಸಲು ಹಾಗೂ ಶಾಲೆಯ ವಾರ್ಷಿಕೋತ್ಸವ, ಇತರ ಸಮಾರಂಭಗಳನ್ನು ನಡೆಸಲು ಉಪಯೋಗಿಸುತ್ತಿದ್ದು, ಶಾಲೆಯ ಸುತ್ತುಗೋಡೆಯನ್ನು ಸಹ ನಿರ್ಮಿಸಲಾಗಿದೆ. ಶಾಲೆ ಚಿಕ್ಕದಾದರೂ ಅದನ್ನು ಸಮರ್ಪಕವಾಗಿ ಉಪಯೋಗಿಸಲಾಗುತ್ತಿದೆ. ಶಾಲೆಯ ಶುಚಿತ್ವವನ್ನು ಕಾಪಾಡಲು ವಿದ್ಯಾರ್ಥಿಗಳು ಮುಂದಾಗಿದ್ದು ಸರತಿಯಂತೆ ಶಾಲಾ ಸ್ವಚ್ಛತಾ ಕಾರ್ಯಗಳಲ್ಲಿ ಪ್ರೀತಿಯಿಂದ ಮತ್ತು ಜವಾಬ್ದಾರಿಯಿಂದ ಇದು ನಮ್ಮ ಶಾಲೆಯೆಂಬ ಮನೋಭಾವದಿಂದ ತೊಡಗಿಸಿಕೊಂಡಿದ್ದಾರೆ.


ಸಹ ಶಿಕ್ಷರೊಡನೆ ಒಡನಾಟ

ಈ ಶಾಲೆಯಲ್ಲಿ ಜಗದೀಶ ಎಂಬ ಸಹಶಿಕ್ಷಕರು ಗುತ್ತಿಗೆ ಆಧಾರದ ಮೇಲೆ ನೌಕರಿಗೆ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದು ಇವರೊಂದಿಗೆ ಆಂಗ್ಲಭಾಷೆ ಬೋಧಿಸಲು ವರಲಕ್ಷ್ಮಿ ಎಂಬ ಶಿಕ್ಷಕಿಯವರು ನೇಮಕವಾಗಿದ್ದಾರೆ. ಇವರ ವೇತನವನ್ನು ಗ್ರಾಮಸ್ಥರು ಮತ್ತು ಮುಖ್ಯ ಶಿಕ್ಷಕರು ನೀಡುತ್ತಿದ್ದಾರೆ. ಇವರು ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಶಾಲಾ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಮ್ಮ ವೃತ್ತಿ ಜೀವನದಲ್ಲಿ ಕಲಿಯಲು ಮುಕ್ತ ಅವಕಾಶ ದೊರೆತಿದೆ, ಇದಕ್ಕೆ ಪ್ರಮುಖ ಕಾರಣ ಶಾಲಾ ಮುಖ್ಯಸ್ಥರೆಂಬ ಅಭಿಮಾನದ ಮಾತುಗಳನ್ನಾಡುತ್ತಾರೆ. ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರ ನಡುವೆ ಉತ್ತಮಬಾಂಧವ್ಯವಿದೆ.

ವೆಂಕಟೇಶ್ ಡಿ.ಎಸ್. ಅವರ ಬಗ್ಗೆ ಪ್ರಶಂಸೆಯ ಮಾತುಗಳು:

ಸಮುದಾಯದ ಕ್ರೋಡೀಕರಣ ಮತ್ತು ಅವರೊಡನೆ ಬೆಳೆದಿರುವ ಆತ್ಮೀಯತೆ ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ಬಹಳ ಉತ್ತಮ ಪರಿಣಾಮ ಬೀರಿರುವುದು ಶ್ಲಾಘನೀಯ. ಶಾಲೆಯಲ್ಲಿ ಇವರು ಬೆಳಿಗ್ಗೆ ಒಂಬತ್ತು ಘಂಟೆಯಿಂದ ಐದು ಘಂಟೆಯವರೆವಿಗೂ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮತ್ತು ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಗ್ರಾಮಸ್ಥರಿಗೆ ಇವರ ಸಮಯವನ್ನು ನೀಡುತ್ತಿದ್ದಾರೆ. ಶಾಲಾ ಸಮಯವನ್ನು ಇತರೆ ಯಾವುದೇ ಕೆಲಸಗಳಿಗೆ ಇವರು ವಿನಿಯೋಗಿಸಲು ಸಿದ್ಧರಿರುವುದಿಲ್ಲ. ಶಾಲಾ ಸಮಯ ಹೊರತುಪಡಿಸಿ ಗ್ರಾಮಸ್ಥರಿಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಹೈನುಗಾರಿಕೆ, ರೇಷ್ಮೆ ಬೆಳೆ, ಸ್ವಸಹಾಯ ಗುಂಪು ಇವುಗಳಿಗೆ ಬೇಕಾದ ಅಗತ್ಯ ಮಾಹಿತಿ ಒದಗಿಸಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಇದರಿಂದ ಕೊಪ್ಪಲಿನ ಜನ ವಲಸೆ ಹೋಗದೆ ಗ್ರಾಮದಲ್ಲೆ ವಾಸ್ತವ್ಯ ಹೂಡುತ್ತಿರುವುದು ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳ ನೆರವಾಗುತ್ತಿದೆ. ಯಾವುದೇ ಮಗು ಈ ವರೆಗೆ ಶಾಲೆಯಿಂದ ವರ್ಗಾವಣೆ ಪತ್ರ ಪಡೆದಿಲ್ಲವೆಂದು ತಿಳಿದುಬಂದಿದೆ.

ವಿದ್ಯಾರ್ಥಿಗಳ ಜೊತೆ ಸಂಭಾಷಿಸಿದಾಗ ಅವರೆಲ್ಲರೂ ತಮ್ಮ ಮುಕ್ತ ಮಾತುಗಳಿಂದ ಶಿಕ್ಷಕರ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ವೆಂಕಟೇಶ್ ಡಿ.ಎಸ್. ಅವರು ನೀಡುತ್ತಿರುವ ಚಟುವಟಿಕೆಗಳನ್ನೊಳಗೊಂಡ ಕಲಿಕೆಯ ವಾತಾವರಣ, ಶಿಕ್ಷಕರ ಅಮೂಲ್ಯ ಸಮಯ, ಅವರ ಪ್ರೀತಿ ಮತ್ತು ತಾಳ್ಮೆ ಕಂಡು ‘ವೆಂಕಟೇಶ್ ಸರ್ ಅಂದ್ರೆ ನಮಗೆಲ್ಲಾ ತುಂಬಾ ಇಷ್ಟ ಉಳಿದ ಶಿಕ್ಷಕರು ಸಹ ಅಷ್ಟೇ ಇಷ್ಟ’ ಎಂಬ ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿರುತ್ತಾರೆ.

ಈ ಎಲ್ಲಾ ನಾಯಕತ್ವ ಗುಣಗಳನ್ನು ಹೊಂದಿರುವ ವೆಂಕಟೇಶ್‍ರವರನ್ನು ಈ ತಾಲೂಕಿನ ಇತರ ಶಿಕ್ಷಕರು ಮಾದರಿ ಶಿಕ್ಷಕರೆಂದು ಗುರುತಿಸಿರುವುದು ಗಮನಾರ್ಹ ಅಂಶ. ಶಿಕ್ಷಕರ ಸಂಘದಲ್ಲಿ ಪದಾಧಿಕಾರಿಗಳಾಗಿದ್ದು ಇದಕ್ಕಾಗಿ ತಮ್ಮ ಶಾಲೆಯ ನಂತರದ ಅವಧಿಯನ್ನು ಉಪಯೋಗಿಸಿಕೊಳ್ಳುತ್ತಾರೆ. ಅಂತಿಮವಾಗಿ ಕೊಪ್ಪಲಿನ ಭೈರವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ತಮ್ಮೆಲ್ಲಾ ಬೆಂಬಲ ತೋರಿಸಿ ಮಾರ್ಗದರ್ಶನ ನೀಡಿರುವ ಅಂಶವನ್ನು ಗ್ರಾಮಸ್ಥರು ಅಭಿಮಾನದ ಮಾತುಗಳ ಮೂಲಕ ವ್ಯಕ್ತಪಡಿಸುತ್ತಾರೆ.

ಉಪಸಂಹಾರ:

ಒಟ್ಟಾರೆ ವೆಂಕಟೇಶ್ ಡಿ.ಎಸ್. ಅವರು ಶಾಲೆಯೊಡನೆ ಮತ್ತು ಸಮುದಾಯದೊಂದಿಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಶೈಕ್ಷಣಿಕವಾಗಿ ಶಾಲೆಯ ಶ್ರೇಯೋಭಿವೃದ್ಧಿಗೆ ಮತ್ತು ಶಾಲೆಯ ಮೂಲಭೂತ ಸೌಕರ್ಯಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಅಭಿವೃದ್ಧಿ ಮಾಡುವುದಕ್ಕೆ ಮುಖ್ಯ ಕಾರಣವಾಗಿದ್ದಾರೆಂಬ ಅಂಶವನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದಕ್ಕಾಗಿ ತಮಗೆ ಸಾಧ್ಯವಾದಷ್ಟು ಸಹಾಯ ಹಸ್ತ ನೀಡಿರುವ ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಗ್ರಾಮಸ್ಥರನ್ನು ಸಹ ಅಭಿನಂದಿಸಬೇಕಾಗಿದೆ. ಇದೆಲ್ಲದರ ಜೊತೆಗೆ ಗ್ರಾಮೀಣ ಯುವಕರಿಗೆ ಉನ್ನತ ಶಿಕ್ಷಣ ಪಡೆಯಲು ಸಲಹೆ ಸೂಚನೆ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ.

ಅಂತಿಮವಾಗಿ ವೆಂಕಟೇಶ್‍ರವರು ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಶಾಲೆಯ ಶೈಕ್ಷಣಿಕ ಪ್ರಗತಿಗೆ ನೂರಕ್ಕೆ ನೂರರಷ್ಟು ತೊಡಗಿಸಿಕೊಂಡು ಶಾಲೆಯ ಅಭಿವೃದ್ಧಿಯ ಜೊತೆಗೆ ಸಮುದಾಯದ ಏಳ್ಗೆಗೂ ಸಹ ಶ್ರಮಿಸುತ್ತಿದ್ದಾರೆ. ಸಮುದಾಯದ ಏಕತೆ ಮತ್ತು ಸಹಭಾಗಿತ್ವದಲ್ಲಿ ಯಶಸ್ಸನ್ನು ಕಂಡಿದ್ದಾರೆ.

Print Friendly, PDF & Email

Leave a Reply

Your email address will not be published.

Scroll to top