Teachers for Inclusive Society

ಎಲ್ಲ ಮಕ್ಕಳೂ ಕಲಿಯಬಲ್ಲರು

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನೀಲೋಗಿಪುರ – ಇದು ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿರುವ ಒಂದು ಶಾಲೆ. ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕಗಳು ಹಿಂದುಳಿದಿರುವ ಕಾರಣ, ಭಾರತ ಸಂವಿಧಾನದ ಅನುಚ್ಛೇದ…

Print Friendly, PDF & Email

ಎಲ್ಲ ಮಕ್ಕಳೂ ಕಲಿಯಬಲ್ಲರು

ಶಿಕ್ಷಕ: ವೀರಯ್ಯ
ಶಾಲೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಿಲೋಗಿಪುರ, ಕೊಪ್ಪಳ ಜಿಲ್ಲೆ

ಲೇ: ರಾಜಶ್ರೀ ಶ್ರೀನಿವಾಸನ್ 

This is a translation of the article originally written in English

ಶಾಲೆಯ ವ್ಯವಸ್ಥೆ:

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನೀಲೋಗಿಪುರ – ಇದು ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿರುವ ಒಂದು ಶಾಲೆ. ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕಗಳು ಹಿಂದುಳಿದಿರುವ ಕಾರಣ, ಭಾರತ ಸಂವಿಧಾನದ ಅನುಚ್ಛೇದ (371 ಜೆ) ಇದರ ಅಡಿಯಲ್ಲಿ ಕೊಪ್ಪಳ ಜಿಲ್ಲೆಯೂ ಸೇರಿದಂತೆ ಬೀದರ್, ಯಾದಗೀರ್, ರಾಯಚೂರು, ಬಳ್ಳಾರಿ ಹಾಗೂ ಕಲಬುರ್ಗಿ ಜಿಲ್ಲೆಗಳಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಈ ಅನುಚ್ಛೇದವು ಶಿಕ್ಷಣದ ವಿಷಯಗಳಲ್ಲಿ ಶೈಕ್ಷಣಿಕ ಹಾಗೂ ವೃತ್ತಿಪರ ತರಬೇತಿ ಸಂಸ್ಥೆಗಳಲ್ಲಿ ಸ್ಥಾನಗಳ ಮೀಸಲಾತಿಗೆ (ಹುಟ್ಟಿದ ಅಥವಾ ಕಾಯಂ ವಾಸಸ್ಥಳ) ಅವಕಾಶ ಒದಗಿಸುತ್ತದೆ.

ಕೃಷಿ ಭೂಮಿಯಿಂದ ಸುತ್ತುವರೆದಿರುವ ನೀಲೋಗಿಪುರ ಸುಮಾರು 300 ಕುಟುಂಬಗಳಿರುವ ಒಂದು ಸಣ್ಣ ಹಳ್ಳಿ. ಅದರಲ್ಲಿ ಹೆಚ್ಚಿನವರು ಭೂಕಾರ್ಮಿಕರು ಹಾಗೂ ಇನ್ನುಳಿದವರು ಭೂಮಾಲೀಕರು. 1 ರಿಂದ 8ನೇ ತರಗತಿಯವರೆಗೂ ಇರುವ ಶಾಲೆಯನ್ನು 1958ರಲ್ಲಿ ಕಟ್ಟಲಾಗಿದ್ದು, ಶಾಲೆಯಿಂದ 2 ಕಿ.ಮೀ ದೂರದಲ್ಲಿ ತುಂಗಭದ್ರ ನದಿಯು ಹರಿಯುತ್ತದೆ. ಶಾಲೆಯ ಆವರಣವು ಒಂದು ಆಟದ ಮೈದಾನ, 5 ತರಗತಿಗಳು, ಪ್ರಯೋಗಾಲಯದ ಸಾಮಗ್ರಿಗಳನ್ನಿಟ್ಟಿರುವ ಒಂದು ಕೊಠಡಿ, ಪ್ರಾಂಶುಪಾಲರು ಹಾಗೂ ಶಿಕ್ಷಕರಿಗಿರುವ ಒಂದು ಕೊಠಡಿ ಹಾಗೂ ಮಧ್ಯಾಹ್ನದ ಬಿಸಿಊಟ ತಯಾರಿಸುವ ಅಡುಗೆ ಮನೆಯನ್ನು ಹೊಂದಿದೆ. 1 ರಿಂದ 3 ನೇ ತರಗತಿಯಲ್ಲಿ ನಲಿ-ಕಲಿ ವಿಧಾನವನ್ನು ಅನುಸರಿಸಲಾಗುತ್ತದೆ. ವಿದ್ಯಾರ್ಥಿಗಳ ದಾಖಲಾತಿ 223 ಇರುವ ಶಾಲೆಯು 7 ಪುರುಷ ಶಿಕ್ಷಕರನ್ನು ಹೊಂದಿದೆ. ಮಹಿಳಾ ಶಿಕ್ಷಕರಿಲ್ಲ. ಬಹಳಷ್ಟು ವಿದ್ಯಾರ್ಥಿಗಳು ಅದೇ ಹಳ್ಳಿಯವರು. ಕೆಲವರು ಹತ್ತಿರದ ಹಳ್ಳಿಗಳಿಂದಲೂ ಬರುವವರಿದ್ದಾರೆ. ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಂತರ, ಪ್ರೌಢಶಿಕ್ಷಣಕ್ಕಾಗಿ 4ಕಿ.ಮೀ ದೂರದಲ್ಲಿರುವ ಬೋಚನಹಳ್ಳಿಗೋ, 9ಕಿ.ಮೀ ದೂರದಲ್ಲಿರುವ ಅಳವಂಡಿಗೋ ಅಥವಾ 7ಕಿ.ಮೀ ದೂರದಲ್ಲಿರುವ ಹಟ್ಟಿಗೆ ಹೋಗಬೇಕಾಗುತ್ತದೆ. ಈಗಾಗಲೇ ಅಲ್ಪ ಆದಾಯದಲ್ಲಿ ಬದುಕು ಸಾಗಿಸುತ್ತಿರುವ ಕುಟುಂಬಗಳಿಗೆ, ಪ್ರೌಢಶಿಕ್ಷಣಕ್ಕಾಗಿ ಬಸ್ ಪ್ರಯಾಣ ಹೆಚ್ಚುವರಿ ಖರ್ಚು ಎಂದೆನಿಸುತ್ತದೆ. ಇದರಿಂದಾಗಿ ಪ್ರೌಢಶಿಕ್ಷಣವನ್ನು ಮುಂದುವರೆಸುವುದು ಬಹಳಷ್ಟು ಮಕ್ಕಳಿಗೆ ಅದರಲ್ಲೂ ಹುಡುಗಿಯರಿಗೆ ಸವಾಲಾಗಿದೆ.

ವೀರಯ್ಯನವರ ಸ್ಥೂಲ ಪರಿಚಯ:

ವೀರಯ್ಯ ಸ.ಹಿ.ಪ್ರಾ. ಶಾಲೆಯ  ವಿಜ್ಞಾನ ಶಿಕ್ಷಕರು. ದಾವಣಗೆರೆಯವರಾದ ಇವರು ತಮ್ಮ ಪ್ರೌಢಶಿಕ್ಷಣ, ಪದವಿ ಹಾಗೂ ಬಿ.ಎಡ್ ಶಿಕ್ಷಣವನ್ನು ಅಲ್ಲಿಯೇ ಪೂರೈಸಿದ್ದಾರೆ. ಮನೆಯಲ್ಲಿ ಬಡತನದ ವಾತಾವರಣವಿದ್ದರೂ, ಇವರ ಪೋಷಕರು ಶಿಕ್ಷಣವನ್ನು ಮುಂದುವರೆಸಲು ಪ್ರೋತ್ಸಾಹ ನೀಡಿದ್ದಾರೆ. ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಹಕಾರ ನೀಡಿದ ಶಾಲೆಯ ಶಿಕ್ಷಕರ ದಯೆ ಹಾಗೂ ಅನುಕಂಪವನ್ನು ಅವರು ಈಗಲೂ ನೆನೆಯುತ್ತಾರೆ. ಕುಟುಂಬ ಹಾಗೂ ತಮ್ಮ ವಿದ್ಯಾಭ್ಯಾಸ ನಿರ್ವಹಣೆಗೆ ಅರೆಕಾಲಿಕ ಕೃಷಿ ಕಾರ್ಮಿಕರಾಗಿ ಕೆಲಸ ಮಾಡಿದ್ದಾರೆ. ವೀರಯ್ಯ ಒಂದು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗಣಕಯಂತ್ರ ಶಿಕ್ಷಕರಾಗಿ ಸೇರಿದರು. ಆದರೆ ಒಬ್ಬ ವಿಜ್ಞಾನದ ಶಿಕ್ಷಕರಾಗಬೇಕೆಂಬ ಅಪೇಕ್ಷೆ ಇದ್ದ ಇವರು, ಪ್ರೌಢಶಾಲಾ ನೇಮಕಾತಿಗಾಗಿ ಇದ್ದ ಅರ್ಹತಾ ಪರೀಕ್ಷೆಯನ್ನು ಬರೆದರು. 2004ರಲ್ಲಿ, ಗುಲ್ಬರ್ಗಾ ವಿಭಾಗದಲ್ಲಿ ನವೀಕರಿಸಿದ ನೇಮಕಾತಿಯಿಂದಾಗಿ ನೀಲೋಗಿಪುರ ಶಾಲೆ ಸೇರಿದರು. ಸದ್ಯಕ್ಕೆ 6,7 ಹಾಗೂ 8ನೇ ತರಗತಿಗಳಿಗೆ ಪಾಠ ಮಾಡುತ್ತಾರೆ. ವೀರಯ್ಯನವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಈ ಲೇಖನದಲ್ಲಿ ನೀಲೋಗಿಪುರ ಶಾಲೆಯಲ್ಲಿನ ಅವರ 15 ವರ್ಷದ ಅನುಭವಗಳನ್ನು ಸೆರೆಹಿಡಿಯುವ ಪ್ರಯತ್ನ ಮಾಡಲಾಗಿದೆ.

ಬೋಧನೆಯೆಡೆಗೆ ಅವರ ಬದ್ಧತೆ:

ಒಬ್ಬ ಶಿಕ್ಷಕನಿಗೆ, ವಿದ್ಯಾರ್ಥಿಗಳಲ್ಲಿ ವಿಷಯದ ಜ್ಞಾನದ ಹೆಚ್ಚಳ, ವಿಮರ್ಶಾತ್ಮಕ ಚಿಂತನೆಯ ಪ್ರಗತಿ ಹಾಗೂ ನೈತಿಕ ನಡವಳಿಕೆಯನ್ನು ಬೆಳೆಸುವುದೇ ಗುರಿಯಾಗಿರುತ್ತದೆ. ಆದರೆ ಈ ಗುರಿಯನ್ನು ಸಾಧಿಸುವ ಮಾರ್ಗ ವಿಭಿನ್ನವಾಗಿರುತ್ತದೆ. ವೀರಯ್ಯನವರ ಬೋಧನೆಯ ಮೂಲ ಆಸಕ್ತಿ ಮಕ್ಕಳ ಶೈಕ್ಷಣಿಕ ಬೆಳವಣಿಗೆ. ಮಕ್ಕಳ ಭವಿಷ್ಯದ ಬಗೆಗೆ ಅವರು ನಡೆಸುವ ಚಿಂತನೆ ಮಕ್ಕಳೊಂದಿಗಿನ ಅವರ ಒಡನಾಟದಲ್ಲಿ ಕಂಡುಬರುತ್ತದೆ. ಮಕ್ಕಳ ಜೀವನದ ಮೇಲೆ ಉತ್ತಮ ಪ್ರಭಾವ ಬೀರುವ ಅವರ ಉದ್ದೇಶಕ್ಕೆ ಅವರಲ್ಲಿರುವ ಆಸಕ್ತಿ ಹಾಗೂ ಪ್ರೇರಣೆ ಉತ್ತೇಜನ ನೀಡುತ್ತದೆ. ನಾಲ್ಕು ರೀತಿಯ ಪ್ರಯತ್ನಗಳು ವೀರಯ್ಯನವರ ಬೋಧನೆಯನ್ನು ವಿವರಿಸುತ್ತವೆ:

ವೈಜ್ಞಾನಿಕ ಮನೋಭಾವವನ್ನು ಪೋಷಿಸುವುದು:

ವೀರಯ್ಯನವರು ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ವಿಜ್ಞಾನ ಶಿಕ್ಷಕರಾಗಿದ್ದಾಗ ಪಠ್ಯಪುಸ್ತಕದ ಸಹಾಯದಿಂದ ವಿಜ್ಞಾನವನ್ನು ಕಲಿಸಿದುದನ್ನು ನೆನಪಿಸಿಕೊಳ್ಳುತ್ತಾರೆ. ತರಬೇತಿ ಕಾರ್ಯಾಗಾರಗಳಲ್ಲಿ ಇತರ ಶಿಕ್ಷಕರು ಹಂಚಿಕೊಂಡ ಅನುಭವಗಳನ್ನು ಕೇಳಿದ ನಂತರ, ಮಕ್ಕಳಿಂದ ಸ್ವತಃ ಪ್ರಯೋಗಗಳನ್ನು ಮಾಡಿಸಿದಲ್ಲಿ ತರಗತಿಗಳು ಇನ್ನಷ್ಟು ಆಸಕ್ತಿಕರವಾಗಿರುತ್ತದೆ ಎಂಬ ಸಾಧ್ಯತೆಯ ಬಗ್ಗೆ ವಿಚಾರ ಮಾಡತೊಡಗಿದರು. ಪ್ರಯೋಗಗಳು ಹಾಗೂ ಚಟುವಟಿಕೆಗಳಿಂದ ಮಕ್ಕಳು ವಿಷಯಕ್ಕೆ ಪೂರಕವಾದ ಪ್ರಶ್ನೆಗಳನ್ನು ಕೇಳುತ್ತಾರೆ ಹಾಗೂ ತಮ್ಮದೇ ಪರಿಶೋಧನೆ ಹಾಗೂ ಅವಲೋಕನಗಳಿಂದ ತೆಗೆದುಕೊಂಡ ನಿರ್ಣಯಗಳಿಂದ ಕಲಿಯುತ್ತಾರೆ ಎಂಬುದನ್ನು ಕ್ರಮೇಣ ಅರಿತುಕೊಂಡರು. ಶಾಲೆಯಲ್ಲಿ ಪ್ರಯೋಗಾಲಯವನ್ನು ಆರಂಭಿಸಲು ವಸ್ತುಗಳನ್ನು ಕಲೆಹಾಕತೊಡಗಿದರು. ಶಾಲೆಯ ಒಂದು ಕೊಠಡಿಯನ್ನು ಪ್ರಯೋಗಾಲಯವನ್ನಾಗಿ ಪರಿವರ್ತಿಸಲಾಗಿದೆ ಹಾಗೂ ತಾವು ಸಾಧಿಸಿದ ಕೆಲಸವನ್ನು ತೋರಿಸಲು ಆ ಕೊಠಡಿಯನ್ನು ತೆರೆದಾಗ ಅವರ ಮುಖ ಸಂತೋಷದಿಂದ ಬೆಳಗುತ್ತಿತ್ತು. ಬಹಳಷ್ಟು ವಸ್ತುಗಳನ್ನು ನೆಲದ ಮೇಲೆ ಪ್ರದರ್ಶಿಸಲಾಗಿತ್ತು ಹಾಗೂ ರಾಸಾಯನಿಕಗಳನ್ನು ತೆರೆದ ಕಪಾಟಿನಲ್ಲಿ ಜೋಡಿಸಲಾಗಿತ್ತು. ಈ ಪ್ರಯೋಗಾಲಯದಲ್ಲಿರುವ ವಿವಿಧ ರೀತಿಯ ವಸ್ತುಗಳು ಹಾಗೂ ಉಪಕರಣಗಳನ್ನು ಕಾಲಾನುಕ್ರಮೇಣ ಶೇಖರಿಸಲಾಗಿದೆ – ಸೌರ ಕುಕ್ಕರ್, ಆಯಸ್ಕಾಂತೀಯ ಕ್ಷೇತ್ರ, ಅನಿಮೋಮೀಟರ್, ಚಂದ್ರ ವರ್ಧಿಸುವ ಹಾಗೂ ಕ್ಷೀಣಿಸುವುದನ್ನು ತೋರಿಸುವ ಕಲಿಕಾ ಸಾಮಗ್ರಿಗಳು, ಕಾಂತೀಯತೆ, ಪ್ರಚ್ಛನ್ನ ಶಕ್ತಿ ಹಾಗೂ ಚಲನ ಶಕ್ತಿ, ಧ್ವನಿ ತರಂಗಗಳು, ಬೆಳಕು, ಆಮ್ಲಗಳು/ಪ್ರತ್ಯಾಮ್ಲಗಳು, ಸರಣಿ ಹಾಗೂ ಸಮಾನಾಂತರ ಸಂಪರ್ಕ, ಇತ್ಯಾದಿ.

ಕೆಲವು ಕಲಿಕಾ ಸಾಮಗ್ರಿಗಳನ್ನು ಮಕ್ಕಳ ಸಹಾಯದಿಂದ ಹಾಗೂ ಕೆಲವನ್ನು ತನ್ನ ಸರಿಸಮಾನರೊಂದಿಗೆ ಕೂಡಿ ತಯಾರಿಸಿದ್ದಾರೆ. ಮಕ್ಕಳು ಕೆಲವು ವಸ್ತುಗಳ ಉಪಯೋಗವನ್ನು ಪ್ರದರ್ಶಿಸಿದರು.

ವೀರಯ್ಯನವರು ವಸ್ತುಗಳನ್ನು ಕಲೆಹಾಕುವುದು ಹೇಗೆ? ಕಲಿಕಾ ಸಾಮಗ್ರಿಗಳನ್ನು ರಚಿಸುವುದನ್ನು ಎಲ್ಲಿಂದ ಕಲಿಯುತ್ತಾರೆ? ತಮಗೆ ಅವಶ್ಯಕವಿರುವ ಸಾಮಗ್ರಿಗಳನ್ನು ಕೊಳ್ಳಲು ಅವರಿಗೆ ಹಣ ಎಲ್ಲಿಂದ ದೊರೆಯುತ್ತದೆ? ಅವರಿಗೆ ಯಾರು ಸಹಾಯ ಮಾಡುತ್ತಾರೆ? ಇಷ್ಟೆಲ್ಲ ಮಾಡಲು ಅವರಿಗೆ ಪ್ರೇರಣೆ ಎಲ್ಲಿಂದ ದೊರೆಯುತ್ತದೆ? ಅವರ ಪ್ರಯತ್ನಗಳಿಗೆ ದೊರೆಯುವ ಫಲಿತಾಂಶವೇನು? ಮಕ್ಕಳಿಗೆ ಬೋಧಿಸುವ ಕೆಲಸದ ಮೇಲಿರುವ ಪ್ರೀತಿ, ಅವರಲ್ಲಿ ವೈಜ್ಞಾನಿಕ ಮನೋಭಾವವನ್ನು ಪೋಷಿಸುವುದು ಹಾಗೂ ಶಿಕ್ಷಣವನ್ನು ಮುಂದುವರೆಸಲು ಸಹಾಯ ಮಾಡುವುದು ವೀರಯ್ಯನವರ ಪ್ರಯತ್ನಗಳ ಪ್ರಮುಖ ಅಂಶವೆನಿಸುತ್ತದೆ.

ಕಲಿಕಾ ಸಾಮಗ್ರಿಗಳನ್ನು ಕೊಳ್ಳಲು ಸರ್ಕಾರದಿಂದ ಅಲ್ಪ ಧನ ಸಹಾಯ ಸಿಕ್ಕರೂ, ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಯೋಗಾಲಯದ ವಸ್ತುಗಳನ್ನು ಕೊಳ್ಳಲು ಹಣ ಕೊಡುವುದಿಲ್ಲ. ಆದರೆ ವೀರಯ್ಯನವರು ಈ ಪರಿಸ್ಥಿತಿಯನ್ನು ಎದುರಿಸಲು ತಮ್ಮದೇ ಆದ ಸೃಜನಶೀಲ ಹಾಗೂ ವಿಶಿಷ್ಟವಾದ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಕಲಿಕಾ ವಸ್ತುಗಳನ್ನು ತಯಾರಿಸಲು ನಿರುಪಯುಕ್ತ ಅಥವಾ ಕಡಿಮೆ ವೆಚ್ಚದ ವಸ್ತುಗಳನ್ನು ಬಳಸುತ್ತಾರೆ. ಅವರ ಯೋಜನೆಗೆ ಬೇಕಾದ ಸಾಮಗ್ರಿಗಳು ಹೆಚ್ಚಿನ ಬಾರಿ ಹಳ್ಳಿಯಲ್ಲಿ ಸಿಗುವುದಿಲ್ಲ. ಹೀಗಾಗಿ ಅವುಗಳನ್ನು ಸಂಗ್ರಹಿಸಲು ಕೊಪ್ಪಳ ಪಟ್ಟಣಕ್ಕೆ ಹೋಗುತ್ತಾರೆ. ಉದಾಹರಣೆಗೆ, ಅವರಿಗೆ ಗಾಜಿನ ತುಂಡುಗಳು ಬೇಕಾಗಿದ್ದಲ್ಲಿ ಗಾಜಿನ ಅಂಗಡಿಗೆ ಹೋಗಿ ಗಾಜನ್ನು ತುಂಡರಿಸಿದಾಗ ಉಳಿಯುವ ಅನುಪಯುಕ್ತ ತುಂಡುಗಳನ್ನು ಕೊಳ್ಳುತ್ತಾರೆ. ಅಂತಹ ಅಂಗಡಿಗಳು ಕೇವಲ ಗಾಜಿನ ತುಂಡುಗಳಿಗೆ ಹಣ ತೆಗೆದುಕೊಳ್ಳುತ್ತಾರೆಯೆ ಹೊರತು ಅದರ ಕೂಲಿಯನ್ನು ಬೇಡುವುದಿಲ್ಲ. ಇದರಿಂದ ಅವರು ತಮ್ಮ ಸ್ವಂತ ಹಣದಿಂದ ವಸ್ತುಗಳನ್ನು ಕೊಳ್ಳಲು ಸಾಧ್ಯವಾಗುತ್ತದೆ. ಮೇಲಿಂದ ಮೇಲೆ ಅಂಗಡಿಗೆ ಭೇಟಿ ನೀಡುವುದರಿಂದ, ಇವರು ಒಬ್ಬ ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ಬೋಧನೆಗಾಗಿ ವಸ್ತುಗಳನ್ನು ಕೊಳ್ಳುತ್ತಾರೆ ಎಂದು ಮನಗಂಡಿರುವ ಅಂಗಡಿಯ ಮಾಲೀಕರು ಬಹಳಷ್ಟು ಸಲ ಇವರಿಗೆ ಬೇಕಾದ ವಸ್ತುಗಳನ್ನು ಉಚಿತವಾಗಿ ನೀಡುತ್ತಾರೆ. ಕೆಲವೊಮ್ಮೆ 8ನೇ ತರಗತಿಯನ್ನು ಪೂರ್ಣಗೊಳಿಸಿ ಪ್ರೌಢಶಾಲೆಗೆ ಹೋಗುವ ಮಕ್ಕಳು, ಕಿರಿಯ ವಿದ್ಯಾರ್ಥಿಗಳಿಗೆ ಬೇಕಾಗುವ ಕಲಿಕಾ ಸಾಮಗ್ರಿಗಳನ್ನು ಕೊಳ್ಳಲು ಬೇಕಾದ ಹಣವನ್ನು ಉಡುಗೊರೆಯಾಗಿ ನೀಡುತ್ತಾರೆ. ಮಕ್ಕಳು ಅಪೂರ್ವವಾದ ವಸ್ತುಗಳ ಬಗ್ಗೆ ಉತ್ಸುಕರಾಗುವುದನ್ನು ನೋಡಿದಾಗ ವೀರಯ್ಯ ಅವರಿಗೆ ಈ ಎಲ್ಲ ಸವಾಲುಗಳು ತೆರೆಮರೆಗೆ ಸರಿಯುತ್ತವೆ. ಅವರೆನ್ನುತ್ತಾರೆ, ‘ತಾವು ನೋಡಿರದ ರಾಸಾಯನಿಕಗಳನ್ನು ತೋರಿಸಿದಾಗ ಮಕ್ಕಳು ರೋಮಾಂಚನಗೊಳ್ಳುತ್ತಾರೆ ಹಾಗೂ ಉತ್ಸಾಹಭರಿತರಾಗಿರುತ್ತಾರೆ’. ಮಕ್ಕಳಲ್ಲಿ ಸಹಜವಾಗಿ ಇರುವ ಬಾಲ್ಯದ ವಿಶಿಷ್ಟ ಲಕ್ಷಣಗಳಾದ ವಿಸ್ಮಯ, ಆಶ್ಚರ್ಯ ಹಾಗೂ ಕುತೂಹಲವು, ವೀರಯ್ಯನವರು ಅಳವಡಿಸಿಕೊಂಡಿರುವ ಶಿಕ್ಷಣಶಾಸ್ತ್ರದ ಅಭ್ಯಾಸದಿಂದ ಇನ್ನೂ ಜೀವಂತವಾಗಿದೆ. ನಿಜಕ್ಕೂ ಮಕ್ಕಳ ಆಸಕ್ತಿಗಳು, ಅನುಭವಗಳು ಹಾಗೂ ಸಾಮಾಜಿಕ ಸಂದರ್ಭಗಳಿಗೆ ಬೋಧನೆ ಹಾಗೂ ಕಲಿಕೆಯ ಒಂದು ಮಾಧ್ಯಮವಾಗಿದೆ (Dewey, 1938).

ಒಮ್ಮೆ ಮಕ್ಕಳಿಗೆ ಪರೀಕ್ಷಿಸುವ ಹಾಗೂ ಪ್ರಯೋಗಿಸಲು ಅವಕಾಶ ದೊರೆತ ನಂತರ, ವೀರಯ್ಯನವರಿಗೆ ಪ್ರತಿಕ್ರಿಯಿಸಲು ನಾಲ್ಕು ಪ್ರಶ್ನೆಗಳನ್ನು ನೀಡುತ್ತಾರೆ. ಅನಂತರ ಮಕ್ಕಳು ತಮ್ಮ ಅಭಿಪ್ರಾಯಗಳನ್ನು ಹಾಗೂ ಕಲಿಕೆಯನ್ನು ಪುಸ್ತಕಗಳಲ್ಲಿ ದಾಖಲಿಸುತ್ತಾರೆ. ಇದರಿಂದ ಮಕ್ಕಳು ತಾವು ನೋಡಿ, ಪರೀಕ್ಷಿಸಿ ಹಾಗೂ ವಿಚಾರಿಸಿದುದನ್ನು ಬರವಣಿಗೆಯ ಮೂಲಕ ವ್ಯಕ್ತಪಡಿಸುವುದನ್ನು ಕಲಿಯುತ್ತಾರೆ.

ವೀರಯ್ಯ ತಾವು ಮಕ್ಕಳಿಗೆ ವಿಜ್ಞಾನ ಪ್ರಯೋಗಾಲಯದ ಒಂದು ಅನುಭವವನ್ನು ಒದಗಿಸುವುzಕ್ಕೆ ಸಾಧ್ಯವಾಯಿತು ಎಂಬ ಸಂಗತಿಯಿಂದ ಸಂತೋಷಗೊಂಡಿದ್ದಾರೆ. ಬೋಧನೆ ವೈ ಜ್ಞಾನಿಕ ಚಿಂತನೆ ಹಾಗೂ ಮನೋಭಾವನೆಯನ್ನು ಬಲಪಡಿಸುವ ರೀತಿಯಲ್ಲಿ ಇರಬೇಕು ಎಂದು ಅಪೇಕ್ಷಿಸುತ್ತಾರೆ. ‘ ವಿಜ್ಞಾನ ಬೋಧನೆ ಮಕ್ಕಳನ್ನು ಕುತೂಹಲಿಗಳನ್ನಾಗಿಸಬೇಕು. ಹೆಚ್ಚಿನ ಪ್ರಶ್ನೆಗಳನ್ನು ಕೇಳುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು. ವಿಜ್ಞಾನ ದಲ್ಲಿ ಮಕ್ಕಳ ಆಸಕ್ತಿ ಮುಂದುವರೆಯಬೇಕು. ಚಿಂತನೆಯ ಅಭ್ಯಾಸ ರೂಪುಗೊಳ್ಳಬೇಕಾಗಿದೆ’ ಎನ್ನುತ್ತಾರೆ. ಸ್ವತಂತ್ರವಾಗಿ ಸಾಮಗ್ರಿಗಳನ್ನು ಬಳಸಿ ಕೆಲಸ ಮಾಡುವುದರಿಂದ, ಮಕ್ಕಳು ಸ್ವತಂತ್ರ ಭಾವನೆಯನ್ನು ಹೊಂದುತ್ತಾರೆ ಎಂಬುದು ಅವರ ಅಭಿಪ್ರಾಯ. ಅವರ ವಿಜ್ಞಾನ ಬೋಧನಾ ಕ್ರಮವನ್ನು ಅವಲೋಕಿಸಿದಾಗ ಅವರು ನಂಬಿರುವ ಹಲವಾರು ಅಂಶಗಳನ್ನು ತೋರಿಸಿಕೊಡುತ್ತದೆ.

ವೀರಯ್ಯನವರು ತರಗತಿಯಲ್ಲಿ ಸಸ್ಯಗಳ ಸಂತಾನೋತ್ಪತ್ತಿ ವಿಧಾನದ ಬಗ್ಗೆ ಪಾಠ ಮಾಡುತ್ತಿದ್ದುದನ್ನು ಗಮನಿಸಿದೆವು. ವಿವಿಧ ಬಗೆಯ ಹೂವುಗಳು ಹಾಗೂ ತರಕಾರಿಗಳನ್ನು ತರಗತಿಗೆ ತಂದಿದ್ದರು. ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳುತ್ತ, ಸ್ಥಳೀಯವಾಗಿ ದೊರೆಯುವ ಹೂವುಗಳು ಹಾಗೂ ತರಕಾರಿಗಳ ಬಗ್ಗೆ ಉದಾಹರಿಸುತ್ತ ಸಸ್ಯಗಳ ಸಂತಾನೋತ್ಪತ್ತಿ ವಿಧಾನದ ಬಗ್ಗೆ ಯೋಚಿಸುವಂತೆ ಮಾಡುತ್ತಿದ್ದರು. ಮಕ್ಕಳು ತಲ್ಲೀನರಾಗಿ ಕೇಳುತ್ತ ಬಹಳ ಉತ್ಸಾಹದಿಂದ ಉದಾಹರಣೆಗಳನ್ನು ನೀಡುತ್ತ ಉತ್ತರಿಸಿದರು. ಮಕ್ಕಳ ಹಿನ್ನೆಲೆ, ಸಂದರ್ಭಗಳು, ಆಸಕ್ತಿಗಳು ಹಾಗೂ ಅನುಭವಗಳೊಂದಿಗೆ ವಿಜ್ಞಾನ ವನ್ನು ಸಮೀಕರಿಸುವುದು ಹಾಗೂ ಆ ಪ್ರಕ್ರಿಯೆಯಲ್ಲಿ ವಿಷಯವನ್ನು ಮಕ್ಕಳಿಗೆ ಅರ್ಥಪೂರ್ಣವಾಗಿ ತಲುಪಿಸುವುದೇ ವೀರಯ್ಯನವರ ಸಾಮರ್ಥ್ಯಹಾಗೂ ಅದೇ ನಿಜವಾದ ವಿಜ್ಞಾನ ಬೋಧನೆ. ಇದೇ ಸರಿಯಾದ ಬೋಧನೆಯ ಲಕ್ಷಣ ಎಂಬುದನ್ನು ಅಲ್ಲಗಳೆಯಲಾಗದು.

ವೃತ್ತಿಪರ ಜ್ಞಾನವನ್ನು ಅಭಿವೃದ್ಧಿಪಡಿಸುವುದು:

ವಿಜ್ಞಾನ ಪಠ್ಯಕ್ರಮ, ಶಿಕ್ಷಣ ಶಾಸ್ತ್ರ, ವಿಜ್ಞಾನ ಕಲಿಯುವವರು ಹಾಗೂ ವಿವಿಧ ಕಲಿಕಾ ಸಾಮಗ್ರಿಗಳೊಂದಿಗಿನ ಅವರ ಒಡನಾಟ ತನ್ನದೇ ಆದ ವೃತ್ತಿಪರ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳುವುದಕ್ಕೆ ಒಂದು ಸನ್ನಿವೇಶವನ್ನು ಸೃಷ್ಟಿಮಾಡಿದೆ. ವಿಷಯ ಮತ್ತು ಶಾಸ್ತ್ರದ ‘ವಿಶೇಷ ಹೂರಣವಾದ ‘ಶಾಸ್ತ್ರೀಯ ವಿಷಯ ಜ್ಞಾನವನ್ನು ತಮ್ಮೊಳಗೆ ಬೆಳೆಸುವಲ್ಲಿ ಅವರು ನಿರತರಾಗಿದ್ದಾರೆ. ಈ ಜ್ಞಾನವು ಶಿಕ್ಷಕರ ತಾತ್ವಿಕ ಜ್ಞಾನ, ವಿದ್ಯಾರ್ಥಿಗಳ ಹಿನ್ನೆಲೆಯ ಗುಣಗಳು, ನಿರ್ದಿಷ್ಟ ಪಠ್ಯ ಸಾಮಗ್ರಿಗಳು, ಸಮುದಾಯದ ಸನ್ನಿವೇಶಗಳು ಮತ್ತು ಶೈಕ್ಷಣಿಕ ಉದ್ದೇಶಗಳು (Schulman, 1987) ಇವನ್ನು ಒಳಗೊಂಡಿವೆ. ತಮ್ಮ ತರಗತಿಗಳನ್ನು ಕ್ರಿಯಾಶೀಲವೂ ಮತ್ತು ಆಸಕ್ತಿಕರವೂ ಆಗಿರುವಂತೆ ಮಾಡುತ್ತಾ, ಮಕ್ಕಳ ವಿಜ್ಞಾನ ಕಲಿಕೆಯ ಪ್ರೀತಿಯನ್ನು ನಿರಂತರವಾಗಿ ಉಳಿಸಿಕೊಳ್ಳುವುದಕ್ಕಾಗಿ ತಮ್ಮನ್ನೇ ತಾವು ಹೊಸದಾಗಿಸಿಕೊಳ್ಳುವುದರತ್ತ ಇವರು ಗಮನ ನೀಡುತ್ತಾರೆ.

ಅಜೀಂ ಪ್ರೇಮ್‍ಜೀ ಪ್ರತಿಷ್ಠಾನ ಆಯೋಜಿಸುವ ವಿವಿಧ ಮೇಳಗಳಲ್ಲಿ ಮತ್ತು ಯೂ ಟ್ಯೂಬ್ ವಿಡಿಯೋಗಳ ಮೂಲಕ ಕಸದಿಂದ ಕಲಿಕಾ ಸಾಮಗ್ರಿಗಳನ್ನು ಮಾಡುವುದನ್ನು ವೀರಯ್ಯನವರು ಕಲಿಯುತ್ತಾರೆ. ಅಳವಂಡಿಯ ಶಿಕ್ಷಕ ಕಲಿಕಾ ಕೇಂದ್ರದಿಂದ (ಟಿಎಲ್‍ಸಿ) ಪುಸ್ತಕಗಳನ್ನು ಎರವಲು ಪಡೆಯುತ್ತಾರೆ. ಶಿಕ್ಷಕ ಕಲಿಕಾ ಕೇಂದ್ರದಲ್ಲಿನ ಹಲವಾರು ಕುತೂಹಲಕಾರಿ ಚರ್ಚೆಗಳು ತರಗತಿಯಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಉಪಯೋಗವಾಗುತ್ತವೆ. ಇತರರ ಚಿಂತನೆಗಳನ್ನು ಒಳಗೊಳ್ಳುವಂತಹ ಮತ್ತು ಎಲ್ಲಾ ಕಲಿಕಾ ಅವಕಾಶಗಳನ್ನು ಉಪಯೋಗಿಸಿಕೊಳ್ಳುವಂತಹ ಮನಸ್ಥಿತಿ ವೀರಯ್ಯನವರ ಮಾತಿನಲ್ಲಿ ನಿಚ್ಚಳವಾಗುತ್ತದೆ. ತಮ್ಮ ಸಹೋದ್ಯೋಗಿಗಳಿಂದ ಪಡೆಯುವ ಬೆಂಬಲವನ್ನು ವೀರಯ್ಯನವರು ಅಮೂಲ್ಯವೆಂದು ಅರಿತಿದ್ದಾರೆ. ಅವರ ಸಹೋದ್ಯೋಗಿಗಳ ಪ್ರಕಾರ ವೀರಯ್ಯನವರು ಸ್ನೇಹಪರ, ಮೃದುಹೃದಯಿ ಮತ್ತು ಸುಲಭವಾಗಿ ಹತ್ತಿರವಾಗುವಂತವರು. ಎಂತಹ ಕಷ್ಟದ ವಿಷಯವನ್ನೂ ಮಕ್ಕಳಿಗೆ ಸುಲಭವಾಗಿ ದಕ್ಕುವಂತೆ ಮಾಡುವ ವೀರಯ್ಯನವರ ಸಾಮರ್ಥ್ಯವನ್ನು ಸಹೋದ್ಯೋಗಿಗಳು ಮೆಚ್ಚುತ್ತಾರೆ. ಸುತ್ತಮುತ್ತ ದೊರಕುವ ಸಾಮಗ್ರಿಗಳನ್ನೇ ಉಪಯೋಗಿಸಿ ಚಟುವಟಿಕೆಗಳನ್ನೂ ಮತ್ತು ಪ್ರಯೋಗಗಳನ್ನೂ ಮಾಡಿ ತೋರಿಸುವುದು ಜೊತೆಗೆ ಸ್ಥಳೀಯ ಭಾಷೆಯನ್ನೇ ಉಪಯೋಗಿಸುವುದು ಇವುಗಳಿಂದ ಮಕ್ಕಳು ಸುಲಭವಾಗಿ ವಿಜ್ಞಾನದಲ್ಲಿ ಸಮಸ್ಯೆ-ಪರಿಹಾರವನ್ನು ಕಲಿಯುತ್ತಾರೆ. ವಿಜ್ಞಾನ ದಲ್ಲಿನ ಪರಿಣತಿಯೊಂದಿಗೆ, ವೀರಯ್ಯನವರು ಸಮಾಜ ವಿಜ್ಞಾನ ಮತ್ತು ಭಾಷೆಯಲ್ಲೂ ನುರಿತವರು ಎಂದು ಸಹೋದ್ಯೋಗಿಗಳು ಬಲ್ಲರು. ಅವರು ಕವಿತೆಯನ್ನೂ ಬರೆಯುತ್ತಾರೆ. ಮಕ್ಕಳ ಬಗ್ಗೆ ವೀರಯ್ಯನವರ ಸ್ನೇಹಪರ ನಿಲುವು ಮತ್ತು ಅವರ ಶಿಕ್ಷಣದಲ್ಲಿ ಅವರು ತೋರುವ ವೈಯಕ್ತಿಕ ಆಸಕ್ತಿಯ ಬಗ್ಗೆ ಅಂಗನವಾಡಿಯ ಸಹಾಯಕರಾಗಿರುವ ಎಸ್‍ಡಿಎಂಸಿ ಸದಸ್ಯರೊಬ್ಬರು ಮೆಚ್ಚುಗೆಯ ಮಾತನ್ನಾಡಿದರು. ಸ್ವಚ್ಛ ಭಾರತ ಅಭಿಯಾನ, ಪ್ಲಾಸ್ಟಿಕ್ ಮಾಲಿನ್ಯದ ಅರಿವು ಕಾರ್ಯಕ್ರಮ ಮುಂತಾದ ಹಳ್ಳಿಯ ಸಾಮಾಜಿಕ ಚಟುವಟಿಕೆಗಳಲ್ಲೂ ಅವರು ಕೈಜೋಡಿಸುವುದನ್ನು ಸಮುದಾಯವು ಶ್ಲಾಘಿಸುತ್ತದೆ.

ಮಕ್ಕಳೊಡನೆ ಕಾಳಜಿಯ ಸಂಬಂಧ:

ಕಲಿಸುವುದು ಮಕ್ಕಳ ಬೆಳವಣಿಗೆಯ ಗುರಿ ಹೊಂದಿರುವ ಒಂದು ಸಂಬಂಧ ಆಧಾರಿತ ಪ್ರಕ್ರಿಯೆ. ಕಲಿಯುವವರ ಕಲಿಕೆಯ ಬಗ್ಗೆ ಕಾಳಜಿ ಹೊಂದಿರುವುದೇ ಚೆನ್ನಾಗಿ ಕಲಿಸುವುದರ ಹಿಂದಿರುವ ಮರ್ಮ. ಒಳ್ಳೆಯ ಶಿಕ್ಷಕರು ಕಾಳಜಿ ತೋರುತ್ತಾರೆ, ಮತ್ತು ಚೆನ್ನಾಗಿ ಕಲಿಸುವುದಕ್ಕೆ ಕಾಳಜಿ ತೋರುವುದರೊಡನೆ ಬಿಡಿಸಿಕೊಳ್ಳಲಾರದ ನಂಟಿದೆ (Rogers and Webb, 1991). ಕಾಳಜಿ ತೋರುವ ಅಭ್ಯಾಸಗಳಲ್ಲಿ ಮಕ್ಕಳ ಅಗತ್ಯ ಮತ್ತು ಆಸಕ್ತಿಗಳೆಡೆಗೆ ಸ್ಪಂದಿಸುವುದು, ತಾಳ್ಮೆ, ಅವರನ್ನು ಅರ್ಥ ಮಾಡಿಕೊಳ್ಳುವುದು, ಸಂವಹನ ಮತ್ತು ಭಾವನಾತ್ಮಕವಾಗಿ ಮಕ್ಕಳೊಡನೆ ಬೆರೆಯುವುದು – ಈ ಕೆಲವನ್ನು ಹೆಸರಿಸಬಹುದು. ಪಠ್ಯ, ಶಿಕ್ಷಣ ಶಾಸ್ತ್ರ, ತರಗತಿಯೊಳಗಿನ ನಿರ್ವಹಣೆ ಮತ್ತು ಮಕ್ಕಳೊಡನೆಯ ಹೊರಗಿನ ಚಟುವಟಿಕೆಗಳಲ್ಲಿ ಸಣ್ಣ ಮಕ್ಕಳೆಡೆಗಿನ ಈ ಕಾಳಜಿಯು ಕಂಡುಬರುತ್ತದೆ.

ವೀರಯ್ಯನವರೆಂದರೆ ಮಕ್ಕಳಿಗೆ ಬಲು ಮೆಚ್ಚು. ‘ವೀರಯ್ಯ ಸರ್ ನಾವು ವಿಜ್ಞಾನಿಯಾಗಬೇಕೆಂದು ಬಯಸುತ್ತಾರೆ’. ಎಂದೊಬ್ಬ ಮಗು ಹೇಳಿದರೆ, ‘ನಾವು ಹೆಚ್ಚೆಚ್ಚು ಓದಬೇಕೆಂದು ಅವರು ಬಯಸುತ್ತಾರೆ’ ಎಂದು ಮತ್ತೊಂದು ಮಗು ಹೇಳುತ್ತದೆ. ‘ನಾವು ಶಾಲೆಯಲ್ಲಿ ಬಹಳ ಆನಂದವಾಗಿದ್ದೇವೆ’ ಎಂದು ಮಗದೊಬ್ಬ ಸೇರಿಸುತ್ತಾನೆ. ವೀರಯ್ಯನವರ ಪ್ರಕಾರ ಶಾಲೆಯ ಒಳಗಿನ ವಾತಾವರಣ ಸಕಾರಾತ್ಮಕವಾಗಿದೆ. ಎಲ್ಲ ಶಾಲೆಗಳಲ್ಲೂ ಮಮತೆಯ ಮತ್ತು ಕಾಳಜಿಯ ವಾತಾವರಣ ಇದ್ದರೆ, ಮಕ್ಕಳು ಸಂತಸದಿಂದ ಕಲಿಯುತ್ತಾರೆ ಎಂದು ವೀರಯ್ಯನವರು ಒತ್ತಿ ಹೇಳುತ್ತಾರೆ. ಮುಕ್ತವಾಗಿ ಮತ್ತು ನಿಸ್ಸಂಕೋಚದಿಂದ ಶಿಕ್ಷಕರೊಂದಿಗೆ ಮಕ್ಕಳು ಈ ಶಾಲೆಯಲ್ಲಿ ವ್ಯವಹರಿಸುತ್ತಾರೆ. ಮಕ್ಕಳು ಬಹಳ ಅಂತಃಕರಣಿಗಳು ಮತ್ತು ಅದನ್ನೇ ಅವರು ಶಿಕ್ಷಕರಿಂದಲೂ ಬಯಸುತ್ತಾರೆ. ಉದಾಹರಣೆಗೆ, ಮಕ್ಕಳು ಅವರ ಬಳಿ ಬಂದು ಕೈ ಹಿಡಿದುಕೊಳ್ಳುತ್ತಾರೆ; ಮಕ್ಕಳು ಬಿಡುವಾಗಿದ್ದು ವೀರಯ್ಯನವರೂ ಬಿಡುವಾಗಿ ಕುಳಿತಿರುವುದು ಕಂಡರೆ ತಮ್ಮ ತರಗತಿಗೆ ಕರೆದೊಯ್ಯುತ್ತಾರೆ. ಅವರು ಶಾಲೆಗೆ ಬರದಿದ್ದರೆ, ಕರೆ ಮಾಡಿ ವಿಚಾರಿಸಿಕೊಳ್ಳುತ್ತಾರೆ. ಅಪ್ಪುಗೆ, ತಿಂಡಿಗಳು ಇಲ್ಲವೇ ಕರೆಗಳು ಇಂತವಷ್ಟೇ ಕಾಳಜಿಯಲ್ಲ ಎಂದೂ ವೀರಯ್ಯನವರು ವಿವರಿಸುತ್ತಾರೆ. ‘ಒಮ್ಮೊಮ್ಮೆ ನಾನು ಮಕ್ಕಳನ್ನು ಬೈಯುವುದಿದೆ, ನಂತರದಲ್ಲಿ ನನಗೇ ಅದರ ಬಗ್ಗೆ ಬೇಸರವೆನಿಸುತ್ತದೆ’. ಆ ಮಕ್ಕಳನ್ನು ಇದರ ಬಗ್ಗೆ ಕೇಳಿದರೆ, ‘ನೀವು ಬೈಯುವುದು ನಮ್ಮ ಒಳ್ಳೆಯದಕ್ಕೇ ಅಲ್ಲವೇ, ಹಾಗಾಗಿ ನೀವು ಬೈದಿದ್ದಕ್ಕೆ ನಮಗೆ ಬೇಸರವಿಲ್ಲ, ಬೇರೆಯವರ ಮುಂದೆ ಬೈಯಬಾರದಿತ್ತಷ್ಟೇ’ ಎಂದು ಹೇಳುತ್ತಾರೆ. ಮುಕ್ತವಾಗಿ ಮಕ್ಕಳು ಅವರೊಡನೆ ಹಂಚಿಕೊಳ್ಳುವುದು ಮತ್ತು ನಿರಾತಂಕವಾಗಿ ತಮ್ಮ ಭಾವನೆಗಳನ್ನು ತೋರಿಸಿಕೊಳ್ಳುವುದು ಅವರಲ್ಲಿನ ಪರಸ್ಪರ ಗೌರವ ಮತ್ತು ಶಿಕ್ಷಕರು, ಮಕ್ಕಳು ಪರಸ್ಪರರಿಗೆ ತೋರುವ ಕಾಳಜಿಯನ್ನು ಎತ್ತಿಹಿಡಿಯುತ್ತದೆ.

ತರಗತಿಯಲ್ಲಿ ಮಕ್ಕಳಿಗೆ ನಿರಂತರ ಉತ್ತೇಜನ ದೊರಕಬೇಕೆಂದು ವೀರಯ್ಯನವರು ನಂಬುತ್ತಾರೆ. ಮಕ್ಕಳು ತಮ್ಮಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದರೆ, ‘ನಿಮ್ಮಲ್ಲಿ ಯಾರಿಗೂ ಬುದ್ಧಿಮತ್ತೆಯ ಕೊರತೆಯಿಲ್ಲ. ಹೆಚ್ಚು ಅಭ್ಯಾಸ ಮಾಡಬೇಕಷ್ಟೇ. ನೀವು ಹೊಸದೇನನ್ನೂ ಓದದಿದ್ದರೂ ನಾನು ತರಗತಿಯಲ್ಲಿ ಹೇಳಿಕೊಟ್ಟಿದ್ದನ್ನು ಮನೆಯಲ್ಲಿ ಮತ್ತೊಮ್ಮೆ ಅಭ್ಯಾಸ ಮಾಡಿ’ ಎಂದು ಹೇಳುತ್ತಾರೆ. ಈ ಶಾಲೆಗಳಲ್ಲಿನ ಶಿಕ್ಷಕರದು ಬಹಳ ಪರಿಶ್ರಮದ ಕೆಲಸ, ಮಕ್ಕಳ ಶೈಕ್ಷಣಿಕ ಕಲಿಕೆ ಶಾಲೆಯಲ್ಲೇ ಆಗಬೇಕು, ಏಕೆಂದರೆ ಅವರ ಕುಟುಂಬಗಳಲ್ಲಿ ಈ ಮಕ್ಕಳೇ ಶಾಲೆಗೆ ಬರುತ್ತಿರುವ ಮೊದಲ ತಲೆಮಾರಿನವರು, ಹಾಗಾಗಿ ಮನೆಯಲ್ಲಿ ಇದಕ್ಕೆ ಪೂರಕ ಬೆಂಬಲ ದೊರೆಯುವುದಿಲ್ಲ. ಆ ಮಕ್ಕಳ ಮನೆಯ ಪರಿಸ್ಥಿತಿಗಳಾದರೋ ಅತೀ ನಾಜೂಕಿನದಾಗಿದ್ದು, ಕೌಟುಂಬಿಕ ಅಥವಾ ಸಮಾಜಾರ್ಥಿಕ ಕಾರಣದಿಂದ ಮಗುವು ಶಾಲೆಗೆ ಬರದಿರಲೂಬಹುದು ಎಂಬುದರ ಅರಿವು ಶಿಕ್ಷಕರಿಗಿದೆ. ಸಮಾಜದ ಕಡೆಗಣಿತ ವರ್ಗದ ಕುಟುಂಬದ ಮಕ್ಕಳಿಗೆ ಶಾಲೆಯಲ್ಲಿ ಶೈಕ್ಷಣಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ ಮತ್ತು ನೈತಿಕವಾಗಿ ಕಾಳಜಿ ತೋರುವ ದೊಡ್ಡವರ ಅಗತ್ಯ ತುಂಬಾ ಇದೆ.

ಮಕ್ಕಳಿಗೆ ನೆಮ್ಮದಿಯ ಭವಿಷ್ಯವನ್ನು ಕಟ್ಟಿಕೊಡುವುದು:

ಡಿಎಸ್‍ಇಆರ್ ಟಿ ನೀಡುವ ರಾಷ್ಟ್ರೀಯ ಆದಾಯ ಮತ್ತು ಅರ್ಹತಾಧಾರಿತ ಶಿಷ್ಯವೇತನ (ಎನ್‍ಎಮ್‍ಎಮ್‍ಎಸ್) ಪರೀಕ್ಷೆಗಳಿಗೆ ವೀರಯ್ಯನವರು ಮಕ್ಕಳಿಗೆ ತರಬೇತಿ ನೀಡುತ್ತಾರೆ. 7ನೇ ತರಗತಿಯಲ್ಲಿ 55%ಗಿಂತಲೂ ಹೆಚ್ಚಿನ ಅಂಕ ಪಡೆದ, ಪೋಷಕರ ವಾರ್ಷಿಕ ಆದಾಯ ರೂ 1,50,000ಕ್ಕಿಂತಲೂ ಕಡಿಮೆ ಇರುವ 8ನೇ ತರಗತಿಯ ಮಕ್ಕಳಿಗೆ ಈ ವಿದ್ಯಾರ್ಥಿ ವೇತನವನ್ನು 12ನೇ ತರಗತಿಯವರೆಗೂ ನೀಡಲಾಗುತ್ತದೆ. ರಾಜ್ಯಮಟ್ಟದ ಈ ಪರೀಕ್ಷೆಯಲ್ಲಿ ಬೌದ್ಧಿಕ ಸಾಮರ್ಥ್ಯ, ಮತ್ತು 6 ಮತ್ತು 7ನೇ ತರಗತಿಯಲ್ಲಿ ಹೇಳಿಕೊಟ್ಟ ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಗಣಿತದ ಕಲಿಕೆಯನ್ನು ಮಾಪನ ಮಾಡಲಾಗುತ್ತದೆ. ಈ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿದವರಿಗೆ ತಿಂಗಳಿಗೆ 1000 ರೂಗಳ ವಿದ್ಯಾರ್ಥಿ ವೇತನ 12ನೇ ತರಗತಿ ಮುಗಿಸುವವರೆಗೂ 4 ವರ್ಷ ದೊರಕುತ್ತದೆ.

ಶೈಕ್ಷಣಿಕ ವರ್ಷದ ಆರಂಭದಲ್ಲೇ 8ನೇ ತರಗತಿಯ ಯಾವ ಮಕ್ಕಳು ಇದರಲ್ಲಿ ಆಸಕ್ತರಾಗಿದ್ದಾರೆಂದು ವೀರಯ್ಯನವರು ಪಟ್ಟಿ ಮಾಡುತ್ತಾರೆ. ತರಬೇತಿಯಲ್ಲಿ ವರ್ಗಗಳು, ಮಗ್ಗಿಗಳು, ಘನ ಸಂಖ್ಯೆಗಳು, ಭಿನ್ನರಾಶಿ, ಚಿತ್ರಗಳ ಮೂಲಕ ನಿರೂಪಿಸುವುದು, ಈ ಮೂಲ ಪಾಠಗಳ ನಂತರ ಹೆಚ್ಚಿನ ವಿಷಯಗಳ ಬಗ್ಗೆ ತರಬೇತಿ ನೀಡುತ್ತಾರೆ. ಓಎಮ್‍ಆರ್ (Optical Mark Recognition used for answering multiple choice questions) ಪ್ರಶ್ನೆ ಪತ್ರಿಕೆ ಮತ್ತು ಮಾದರಿ ಪ್ರಶ್ನೆÀಗಳ ಸಂಗ್ರಹವಿದ್ದು, ಮಕ್ಕಳ ಅಭ್ಯಾಸದಲ್ಲಿ ಇವನ್ನೆಲ್ಲ ಉಪಯೋಗಿಸುತ್ತಾರೆ. ಈ ಮಕ್ಕಳಿಗೆ ಶಾಲಾ ಅವಧಿಯ ಮೊದಲು ಅಥವಾ ನಂತರ ಇಲ್ಲವೇ ಶನಿವಾರಗಳಂದು ತರಬೇತಿ ನೀಡುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿ ತೇರ್ಗಡೆಯಾದ 32 ಮಕ್ಕಳಲ್ಲಿ 3 ಜನ ಈ ಶಾಲೆಯವರು ಮತ್ತು ಆ ಮೂವರೂ ಹೆಣ್ಣು ಮಕ್ಕಳು. ಈ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಬಹಳ ಕಡಿಮೆ. ಆದರೆ, ತೆಗೆದುಕೊಂಡವರಲ್ಲಿ ಉತ್ತೀರ್ಣರಾಗುವವರ ಸಂಖ್ಯೆ ಹೆಚ್ಚಿನದು ಎಂಬುದು ವೀರಯ್ಯನವರ ಅನಿಸಿಕೆ.

ಮಕ್ಕಳ ಶೈಕ್ಷಣಿಕ ಬೆಳವಣಿಗೆಯೆಡೆಗೆ ವೀರಯ್ಯನವರನ್ನು ಈ ಪರಿಯಲ್ಲಿ ತೊಡಗಿಕೊಳ್ಳುವಂತೆ ಮಾಡಿರುವ ವಿಷಯವಾವುದು? ಸ್ಪಷ್ಟವಾಗಿ ಹೇಳಬೇಕೆಂದರೆ, ಮಕ್ಕಳು ಶಾಲಾ ಶಿಕ್ಷಣವನ್ನು ಮುಂದುವರೆಸಿ ತಮ್ಮ ಪ್ರೌಢ ಶಿಕ್ಷಣವನ್ನು ಪೂರೈಸಬೇಕೆಂಬುದು ವೀರಯ್ಯನವರ ಅಭಿಲಾಷೆ. ಮಕ್ಕಳನ್ನು ಪ್ರೌಢಶಾಲೆಗೆ ಕಳಿಸುವುದು ಪೋಷಕರ ಆರ್ಥಿಕ ಸಾಮರ್ಥ್ಯದ ಮೇಲೆ ನಿರ್ಧರಿತವಾಗುತ್ತದೆ. ಕುಟುಂಬದ ಆರ್ಥಿಕ ಕೊರತೆಯ ಕಾರಣದಿಂದ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಕೃಷಿ ಕೆಲಸಕ್ಕೆ ಕಳಿಸುವ ಸಾಧ್ಯತೆ ಹೆಚ್ಚಿರುತ್ತದೆ. ಬಹುಪಾಲು, ಹೆಣ್ಣುಮಕ್ಕಳು ಈ ಅವಕಾಶದಿಂದ ವಂಚಿತರಾಗುವ ಸಾಧ್ಯತೆ ಹೆಚ್ಚು. ಪೋಷಕರು ಒಂದೋ ಸಣ್ಣ ವಯಸ್ಸಿನಲ್ಲೇ ಅವರಿಗೆ ಮದುವೆಯನ್ನು ಮಾಡಿ ಕಳಿಸುತ್ತಾರೆ ಅಥವಾ ಅವರಿಗಿಂತ ಚಿಕ್ಕ ಮಕ್ಕಳ ಆರೈಕೆಗೆ ಮನೆಯಲ್ಲಿಟ್ಟುಕೊಳ್ಳುತ್ತಾರೆ. ವಿದ್ಯಾರ್ಥಿವೇತನ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಸಹಾಯಮಾಡುತ್ತದೆ. ಒಂದೊಮ್ಮೆ ಅವರಿಗೆ ವಿದ್ಯಾರ್ಥಿವೇತನ ದೊರೆತಲ್ಲಿ, ಆ ಮಕ್ಕಳ ಶಿಕ್ಷಣವನ್ನು ಮುಂದುವರೆಸಲು ಪೋಷಕರ ಮನವೊಲಿಸುವುದು ಸುಲಭವಾಗುತ್ತದೆ. 9ನೆ ತರಗತಿಗೆ ವಿದ್ಯಾರ್ಥಿ ವೇತನದ ಸಹಾಯದಿಂದ ಶಾಲೆಗೆ ಸೇರಿದಲ್ಲಿ, ಅವರ ಮುಂದಿನ ನಾಲ್ಕು ವರ್ಷದ ವಿದ್ಯಾಭ್ಯಾಸ ಅಬಾಧಿತವಾಗಿ ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ನಗರಗಳಲ್ಲಿ ವಿದ್ಯಾರ್ಥಿವೇತನ ಪಡೆಯಲು ಕೆಲವು ಸಂಸ್ಥೆಗಳು ತರಬೇತಿ ನೀಡುತ್ತಿವೆ ಹಾಗೂ ಹತ್ತಿರದ ಪಟ್ಟಣಗಳಲ್ಲಿ ಖಾಸಗಿ ಶಾಲೆಯ ಶಿಕ್ಷಕರು ಮನೆಪಾಠ ನಡೆಸುತ್ತಾರೆ. ಆದರೆ, ನೀಲೋಗಿಪುರ ಶಾಲೆಯ ಬಹುಪಾಲು ಮಕ್ಕಳು ಈ ಮನೆಪಾಠಗಳಿಗೆ ಶುಲ್ಕವಾಗಲೀ ಅಥವಾ ಬಸ್ ಪ್ರಯಾಣದ ದರವಾಗಲೀ ಕೊಡಲು ಶಕ್ಯರಲ್ಲ. ಇದಲ್ಲದೇ, ಹಲವು ಮಕ್ಕಳು ಸಂಜೆಯ ಹೊತ್ತು ಮನೆಗೆಲಸದಲ್ಲಿ ತೊಡಗುವುದರಿಂದ ಮನೆಪಾಠಗಳಿಗೆ ಹೋಗುವುದು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ತಮ್ಮ ಬೋಧನೆ ಮಕ್ಕಳಿಗೆ ಬಹಳ ಮಹತ್ವದ್ದೆಂದು ಅವರ ಯೋಚನೆ.

‘ನನ್ನ ಹಳ್ಳಿಯಲ್ಲಿ ಬಹುಪಾಲು ಮಕ್ಕಳು ಬಡವರು. ಅತ್ಯಂತ ಬಡವರು ಬಹಳ ಚೆನ್ನಾಗಿ ಓದುತ್ತಾರೆ. ಅವರಿಗೆ ಬೇಕಾಗಿರುವುದು ಸಹಾಯ ಅಷ್ಟೇ’ ಎಂದು ವೀರಯ್ಯನವರು ಸಹಾನುಭೂತಿಯಿಂದ ಹೇಳಿದರು. ಮಕ್ಕಳ ಸಾಮಾಜಿಕ-ಸಾಂಸ್ಕತಿಕ ಹಿನ್ನೆಲೆ ಹಾಗೂ ಆರ್ಥಿಕ ಹಿನ್ನೆಲೆಯ ಹೆಚ್ಚಿನ ತಿಳುವಳಿಕೆ ಹಾಗೂ ಎಲ್ಲ ಪ್ರತಿಕೂಲ ವಾತಾವರಣಗಳಲ್ಲಿಯೂ ಮಕ್ಕಳ ಕಲಿಕಾಸಾಮರ್ಥ್ಯದಲ್ಲಿ ಅವರಿಗಿರುವ ನಂಬಿಕೆಯೇ ಪ್ರತಿದಿನವೂ ಅವರ ಬೋಧನಾ ಕ್ರಮದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಯತ್ನ ಮಾಡಲು ಪ್ರೇರೇಪಿಸುತ್ತದೆ. ವೀರಯ್ಯನವರ ಪ್ರಕಾರ ಮಕ್ಕಳು ವಿದ್ಯಾರ್ಥಿವೇತನಕ್ಕಾಗಿ ಪ್ರಯತ್ನ ಮಾಡುವುದು ಅವರ ಸಾಮಾಜಿಕ-ಆರ್ಥಿಕ ಅಥವಾ ಕೌಟುಂಬಿಕ ಪರಿಸ್ಥಿತಿಗಳಿಗೆ ಮಾತ್ರ ಸಂಬಂಧಿಸಿಲ್ಲ. ಈ ವಿದ್ಯಾರ್ಥಿವೇತನವು ಸಿಕ್ಕಿದಲ್ಲಿ ಅವರು ತಮ್ಮ ಜೀವನದ ಜವಾಬ್ದಾರಿಗಳನ್ನು ನಿಭಾಯಿಸಲು ಶಕ್ತರಾಗುತ್ತಾರೆ. ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ಅದನ್ನು ಪಡೆದಿದ್ದೇವೆ ಎಂಬ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ. ತಾವಷ್ಟೇ ಪ್ರೇರಿತರಾಗುವುದಲ್ಲದೇ ಇತರರನ್ನು ಶಿಕ್ಷಣದ ಹಾದಿಯಲ್ಲಿ ಸಾಗುವಂತೆ ಪ್ರೇರೇಪಿಸುತ್ತಾರೆ. ಪುಸ್ತಕಗಳಲ್ಲಿರುವ ವಿಷಯಗಳನ್ನೂ ಮೀರಿದ ಜ್ಞಾನದ ಸಂಸರ್ಗಕ್ಕೆ ಬಂದಾಗ ಮಕ್ಕಳ ಯೋಚನಾಕ್ರಮವೂ ವಿಸ್ತಾರಗೊಳ್ಳುತ್ತದೆ ಎಂಬುದು ಅವರ ಯೋಚನೆ. ಮಕ್ಕಳ ಭವಿಷ್ಯದ ಬಗ್ಗೆ ವೀರಯ್ಯನವರ ಕಾಳಜಿ ಕೇವಲ ಎನ್ ಎಮ್ ಎಮ್ ಎಸ್ ಪರೀಕ್ಷೆಗಳಿಗೆ ತಯಾರು ಮಾಡಿಸುವ ಪ್ರಯತ್ನಕ್ಕಷ್ಟೇ ಸೀಮಿತವಾಗಿರದೆ  ಮಕ್ಕಳು ಹಾಗೂ ಪೋಷಕರೊಂದಿಗಿನ ಅವರ ನಿರಂತರ ಒಡನಾಟದಲ್ಲಿಯೂ ಕಾಣಸಿಗುತ್ತದೆ. ಮಕ್ಕಳು ಯಾವಾಗಲೂ ತಮ್ಮ ತಂದೆತಾಯಿಯರಿಗೆ ಗೌರವ ಕೊಡಬೇಕು, ಚೆನ್ನಾಗಿ ಓದಬೇಕು ಹಾಗೂ ಅವರ ಮಾತನ್ನು ಕೇಳಬೇಕು ಎಂದು ತಿಳಿಹೇಳುತ್ತಾರೆ. ಆದರೆ ಶಿಕ್ಷಣ ನಿಲ್ಲಿಸುವ ವಿಷಯ ಬಂದಾಗ ತಂದೆತಾಯಿಯರ ಮಾತನ್ನು ಕೇಳಬೇಡಿ ಎಂದೂ ಹೇಳುತ್ತಾರೆ. ಈ ವಿಷಯವನ್ನು ನಗುನಗುತ್ತ ನೆನಪಿಸಿಕೊಂಡರೂ ತಕ್ಷಣವೇ ಗಂಭೀರರಾಗಿ ಹೀಗೆಯೇ ಹೇಳಬೇಕೆಂದು ಮಕ್ಕಳಿಗೆ ಹೇಳಿಕೊಡುತ್ತೇನೆ ಎಂದು ಒತ್ತಿ ಹೇಳಿದರು. ವೀರಯ್ಯನವರಿಗೆ ತಮ್ಮ ಈ ಹೇಳಿಕೆಯ ಪರಿಣಾಮದ ಬಗ್ಗೆ ಸ್ಪಷ್ಟ ಅರಿವಿದೆ. ಮಕ್ಕಳಲ್ಲಿ ಭವಿಷ್ಯಕ್ಕಾಗಿ ಎದ್ದು ನಿಲ್ಲುವ ಹಾಗೂ ಬದುಕಿನ ಪಥದ ಮೇಲೆ ಪ್ರಭಾವ ಬೀರುವ ವಿಷಯಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸುತ್ತಿದ್ದಾರೆ.

ವೀರಯ್ಯನವರು ಪೋಷಕರೊಡನೆ ಮುಕ್ತವಾಗಿ ಸಂಭಾಷಣೆ ನಡೆಸುತ್ತಾರೆ. ಮಕ್ಕಳು ಪ್ರೌಢಶಿಕ್ಷಣ ಮುಂದುವರೆಸುವುದರ ಬಗ್ಗೆ ಸಲಹೆ ಕೇಳಲು ಪೋಷಕರು ಇವರನ್ನು ಭೇಟಿ ಮಾಡುತ್ತಾರೆ. ಬಹಳಷ್ಟು ಕುಟುಂಬಗಳು ಇವರ ಸ್ವಂತ ಊರಾದ ದಾವಣಗೆರೆಯವರಾದ ಕಾರಣ, ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿ ಕಳಿಸುವ ಉದ್ದೇಶವಿಟ್ಟುಕೊಂಡಿರುವ ಪೋಷಕರನ್ನು ಒಪ್ಪಿಸುವ ಸವಾಲನ್ನು ಎದುರಿಸಿ ಅವರಿಗೆ ಮನವರಿಕೆ ಮಾಡಿಕೊಡಲು ಸಮರ್ಥರಾಗಿದ್ದಾರೆ. ಶಿಕ್ಷಕ-ಪೋಷಕ ಸಭೆಗಳಲ್ಲಿ ಹಾಗೂ ಇತರ ಸಭೆಗಳಲ್ಲಿ ಶಾಲೆಯ ಶಿಕ್ಷಕರು ಪೋಷಕರೊಡನೆ ಮಕ್ಕಳು ತಮ್ಮ ಶಿಕ್ಷಣವನ್ನು ಪೂರೈಸಬೇಕಾದುದರ ಮಹತ್ವವನ್ನು ತಿಳಿಹೇಳುತ್ತಲೇ ಇರುತ್ತಾರೆ.

ಲಿಂಗ ತಾರತಮ್ಯವು ಕಡಿಮೆಯಾಗುತ್ತಿದೆ ಹಾಗೂ ಅಲ್ಪಾವಧಿ ಕೂಲಿ ಕೆಲಸಕ್ಕಾಗಿ ಮಕ್ಕಳನ್ನು ಶಾಲೆಯಿಂದ ಬಿಡಿಸುವುದೂ ಕಡಿಮೆಯಾಗುತ್ತಿದೆ ಎಂಬ ಆಶಾಭಾವವನ್ನು ವೀರಯ್ಯನವರು ವ್ಯಕ್ತಪಡಿಸುತ್ತಾರೆ. ಕೆಲವು ವರ್ಷಗಳ ಹಿಂದೆ, ಪೋಷಕರು ಶಾಲೆಯ ಆವರಣದೊಳಗೆ ಪ್ರವೇಶಿಸಿ ಕಿಟಕಿಗಳ ಮೂಲಕ ತಮ್ಮ ಮಕ್ಕಳನ್ನು ಕರೆಯುತ್ತಿದ್ದರು. ಆದರೆ ಇತ್ತೀಚೆಗೆ ಅದೂ ಕಡಿಮೆಯಾಗುತ್ತಿದೆ. ಆರ್ಥಿಕ ತೊಡಕುಗಳಿಂದಾಗಿ ಕೆಲವು ಕುಟುಂಬಗಳು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿದರೂ, ಬಹಳಷ್ಟು ಮಕ್ಕಳು ಪೋಷಕರನ್ನು ಕರೆತಂದು ಹೊರಹೋಗಿ ದುಡಿಯುವುದಕ್ಕೆ ಶಿಕ್ಷಕರಿಂದ ಅನುಮತಿಯನ್ನು ಪಡೆಯುತ್ತಾರೆ. ವೀರಯ್ಯನವರು ತಮ್ಮ ಶಾಲೆಯ ಮಕ್ಕಳು ರಾಷ್ಟ್ರೀಯ ಪ್ರತಿಭಾ ಶೋಧ ಪರೀಕ್ಷೆಯನ್ನು(NTSE) ಬರೆದು ಅದರಲ್ಲಿ ಅರ್ಹತೆ ಪಡೆದ ನಂತರ ಅದರಿಂದ ಮಕ್ಕಳ ಉನ್ನತ ಶಿಕ್ಷಣದವರೆಗೂ ಸಂಪೂರ್ಣ ಬೋಧನಾ ಶುಲ್ಕವನ್ನು ಭರಿಸುವಂತಾಗಲಿ ಎಂದು ಆಶಿಸುತ್ತಾರೆ.

ಕೆಲವು ಒಳನೋಟಗಳು:

ಸಮಾನ ಗುಣಮಟ್ಟದ ಶಿಕ್ಷಣ ಪಡೆಯಲು ಕಾನೂನು ಅವಕಾಶ ಕಲ್ಪಿಸಿದ್ದರೂ, ವಾಸ್ತವವಾದರೋ, ಅಸಮಾನ ಅವಕಾಶಗಳು ಮತ್ತು ನಿರಾಶಾದಾಯಕ ಶೈಕ್ಷಣಿಕ ಫಲಗಳಿಂದ ತುಂಬಿಹೋಗಿದೆ. ನಮ್ಮ ಇಂದಿನ ಶಾಲಾ ವ್ಯವಸ್ಥೆಯಲ್ಲಿ, ವಿಶೇಷವಾಗಿ ಮೊದಲ ತಲೆಮಾರಿನ ಶಾಲೆಗೆ ಹೋಗುವವರಲ್ಲಿ ಶೈಕ್ಷಣಿಕ ಸಾಧನೆ ಬಹುಪಾಲು ಮಕ್ಕಳಿಗೆ ಸಿಗದಂತಾಗಿದೆ. ತರಗತಿಗಳು ಹಾಗೂ ಶಾಲೆಯ ಹೊರಗಿನ ಅಸಮಾನತೆಗಳ ಜೊತೆಗೆ, ಶಿಕ್ಷಕರ ಕೈ ಮೀರಿದ ಕೆಲವು ಪರಿಸ್ಥಿತಿಗಳಿಂದಾಗಿ ಕೆಲವೊಮ್ಮೆ ಮಕ್ಕಳು ಕಲಿಕೆಯಿಂದ ಹೊರಗುಳಿಯುವಂತಾಗಬಹುದು. ಶಾಲೆಯನ್ನು ಅರ್ಧಕ್ಕೆ ಬಿಡುವುದು ಅಥವಾ ಓದಲು ಬಾರದೇ ಇರುವುದು, ಸಾಧಾರಣ ಕಲಿಕಾ ಮಟ್ಟ ಇವೆಲ್ಲವೂ ಒಂದೊಂದು ವಿದ್ಯಾರ್ಥಿಯ ವೈಯಕ್ತಿಕ ನ್ಯೂನತೆಯಿಂದ ಉಂಟಾಗುವ ತೊಂದರೆಯೆಂದೋ ಅಥವಾ ಒಂದು ಕುಟುಂಬದ ಉತ್ತಮವಲ್ಲದ ಅಭ್ಯಾಸಗಳು, ಸೋಮಾರಿತನ ಅಥವಾ ಶಿಕ್ಷಣದಲ್ಲಿ ಆಸಕ್ತಿಯಿಲ್ಲದಿರುವ ಸೂಚನೆಗಳೆಂದೋ ಸಮಾಜದ ಬಹುಪಾಲು ಜನರ ನಂಬಿಕೆ (Nieto, 2003). ತಮ್ಮ ಯಾವುದೇ ತಪ್ಪಿಲ್ಲದಿದ್ದರೂ ಮಕ್ಕಳು ಇಂದು ದುರ್ಬಲ ಸ್ಥಿತಿಯಲ್ಲಿದ್ದಾರೆ. ಮಕ್ಕಳಿಗೆ ಶಿಕ್ಷಕರ ಹಾಗೂ ಒಟ್ಟಾರೆ ನಿರಂತರವಾಗಿ ಅವರನ್ನು ಬೆಂಬಲಿಸುವ ಒಂದು ವ್ಯವಸ್ಥೆಯ ಹಾಗೂ ಎಲ್ಲ ಮಕ್ಕಳೂ ಕಲಿಯುವ ಹಾಗೂ ಸಾಧಿಸುವ ಸಾಮಥ್ರ್ಯವುಳ್ಳವರು ಎಂದು ನಂಬುವವರ ಅಗತ್ಯವಿದೆ. ಶಾಲಾ ಶಿಕ್ಷಣದ ಬಲು ಮುಖ್ಯ ವಿಷಯಗಳಾದ ಬುದ್ಧಿಮತ್ತೆ ಅಥವಾ ಪ್ರಶ್ನಿಸುವ ಗುಣವನ್ನು ಬಡತನ, ಜಾತಿ, ಧರ್ಮ ಹಾಗೂ ಇತರ ಸಾಮಾಜಿಕ ಭಿನ್ನತೆಗಳಿಂದಾಗಿ, ಗಣನೆಗೇ ತೆಗೆದುಕೊಳ್ಳುವುದಿಲ್ಲ. ಹಲವಾರು ನಿರ್ಬಂಧಗಳ ನಡುವೆಯೂ ಗುಣಮಟ್ಟದ ಕಲಿಕೆಯನ್ನು ಒದಗಿಸಲು ವಿವಿಧ ಸಂಪನ್ಮೂಲಗಳು, ಆಯ್ಕೆಗಳು ಹಾಗೂ ಪರ್ಯಾಯಗಳನ್ನು ಗುರುತಿಸುವಲ್ಲಿ ವೀರಯ್ಯನಂತಹ ಶಿಕ್ಷಕರು ಸಮರ್ಥರು ಹಾಗೂ ಈ ರೀತಿಯ ಕಲ್ಪನೆಗಳು ಹಾಗೂ ನಂಬಿಕೆಗಳೇ ಅವರ ಕೆಲಸದ ಮೂಲಕ ಬಿಂಬಿಸುತ್ತವೆ . ಪ್ರಯೋಗಾಲಯವನ್ನು ಸಜ್ಜು ಮಾಡುವಂತಹ ಕೆಲಸವೇ ಮಕ್ಕಳ ಕಲಿಕೆಯ ಬಗ್ಗೆ ಶಿಕ್ಷಕರ ಬದ್ಧತೆಯನ್ನು ತೋರಿಸಿಕೊಡುತ್ತದೆ. ಪ್ರಯೋಗ ಮಾಡಲು, ಹೊಸತನ್ನು ಆವಿಷ್ಕರಿಸಲು ಮತ್ತು ಸುತ್ತಲಿನ ವಿಷಯಗಳ ಬಗ್ಗೆ ಪ್ರಶ್ನೆಗಳನ್ನೆತ್ತುತ್ತಾ ಅವರ ಪರಿಧಿಯಲ್ಲಿ ಅವರದೇ ಕಾಣ್ಕೆಗಳನ್ನು ಪಡೆಯುವ, ಅವಕಾಶ ನೀಡುವ ಮೂಲಕ ಮಕ್ಕಳ ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುವುದರಿಂದ, ಅವರು ಕಲಿಕೆಯ ಸ್ವಚ್ಛಂದತೆಯನ್ನು ಅನುಭವಿಸಬಲ್ಲರು. ಮತ್ತೊಂದು ಬಗೆಯಲ್ಲಿ ಹೇಳಬೇಕೆಂದರೆ, ವಿಷಯದ ಜ್ಞಾನ ಮತ್ತು ವಿದ್ಯಾರ್ಥಿಯ ಸ್ವಾನುಭವವು ಒಂದಕ್ಕೊಂದು ಬೆಸೆದಾಗ ಸಾಮಾಜಿಕ ಮತ್ತು ವ್ಯಕ್ತಿಗತ ಬೆಳವಣಿಗೆ ಸಾಧ್ಯವಾಗುತ್ತದೆ (Dewey, 1902). ಈ ಪ್ರಕ್ರಿಯೆಯಲ್ಲಿ ತೊಡಗಿರುವ ಶಿಕ್ಷಕರಿಗಾದರೋ ಇದು ತಮ್ಮ ವೃತ್ತಿ ಸಂಬಂಧೀ ಅರಿವಿನ ಮತ್ತು ಕಲಿಕೆಯ ವಿಸ್ತರಣೆ, ಮತ್ತು ಮಕ್ಕಳೆಡೆಗೆ ವiತ್ತವರ ಬಾಲ್ಯದೆಡೆಗೆ ಹೆಚ್ಚಿನ ಕಾಳಜಿ ಮತ್ತು ಸೂಕ್ಷ್ಮತೆಯ ಹೆಚ್ಚಳ ಎನ್ನಬಹುದು. ಸಾಮಾಜಿಕ-ಸಾಂಸ್ಕತಿಕ ಪದ್ಧತಿಗಳಿಂದ, ಆರ್ಥಿಕ ಮುಗ್ಗಟ್ಟಿನಿಂದ ಉಸಿರುಗಟ್ಟಿಸುವ ಜೀವನ ಹೊಂದಿರುವ, ಶಾಲೆಗೆ ಹೋಗುವಮೊದಲ ತಲೆಮಾರಿನ ಇವರಿಗೆ, ಶಾಲೆಯಲ್ಲಿ ಒಬ್ಬ ಕಾಳಜಿ ತೋರುವ ಮತ್ತು ಬೆಂಬಲಿಸುವ ವಯಸ್ಕರ ಅಗತ್ಯ ಬಹಳ ಇದೆ. ಈ ಶಾಲೆಗಳಿರುವಲ್ಲಿನ ಪ್ರತೀಕೂಲ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪರಿಸರದ ನಡುವೆ ಈ ಶಿಕ್ಷಕರು ಅವಿರತವಾಗಿ ಕೆಲಸ ಮಾಡುತ್ತಿರುತ್ತಾರೆ. ಅವರ ಕೆಲಸದ ಮತ್ತು ಕೆಲಸ ಮಾಡುವಲ್ಲಿನ ಮಿತಿಗಳನ್ನು ಗುರುತಿಸುತ್ತಲೇ, ಈ ಶಿಕ್ಷಕರಿಗೆ ಶಿಕ್ಷಣ ವ್ಯವಸ್ಥೆಯಲ್ಲಿನ ಪ್ರತಿಯೊಬ್ಬರಿಂದಲೂ ಬೆಂಬಲದ ಅಗತ್ಯವಿದೆ. ಈ ಬೆಂಬಲದಿಂದ ಶಿಕ್ಷಣ ವ್ಯವಸ್ಥೆಯ ಅಮೂಲ್ಯ ಗುರಿಗಳು ಸಾರ್ವಜನಿಕ ಶಾಲಾ ವ್ಯವಸ್ಥೆಯು ಪ್ರಜಾಪ್ರಭುತ್ವದೊಳಗೆ ಅರಳಲು ಸಹಾಯವಾಗುತ್ತವೆ.

ಕೃತಙ್ಞತೆಗಳು:

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನೀಲೋಗಿಪುರದ ವಿಜ್ಞಾನ ಶಿಕ್ಷಕರಾದ ವೀರಯ್ಯನವರೊಡನೆ ಶಾಲೆಯಲ್ಲಿ ಸಂವಾದ ನಡೆಸಲಾಯಿತು. ಅಜೀಂ ಪ್ರೇಮ್‍ಜಿ ಪ್ರತಿಷ್ಠಾನದ ಕೊಪ್ಪಳ ಜಿಲ್ಲಾ ಸಂಸ್ಥೆಯ ಸದಸ್ಯರಾದ ಹಮೀದ್ ಮತ್ತು ಶೋಭಾ ಅವರು ವೀರಯ್ಯನವರೊಡನೆ ಮಾತುಕತೆ ನಡೆಸಿದರು. ನಮ್ಮೊಡನೆ ತಮ್ಮ ವಿಚಾರಗಳನ್ನು ಮತ್ತು ಅನುಭವಗಳನ್ನು ಹಂಚಿಕೊಂಡ ವೀರಯ್ಯನವರಿಗೆ ನಮ್ಮ ಕೃತಙ್ಞತೆಗಳು. ಶಾಲೆಯ ಇತರ ಶಿಕ್ಷಕರಿಗೂ ಮತ್ತು ಮಕ್ಕಳಿಗೂ ನಾವು ಕೃತಜ್ಞರಾಗಿದ್ದೇವೆ.

ಆಕರಸೂಚಿ:

Dewey, J. 1938. Experience and education. New York: MacMillan.
Dewey, J. 1902. Child and curriculum. Chicago: University of Chicago Press.
Nieto, S. 2003. What keeps teachers going? New York: Teachers College Press.
Shulman. 1987. Knowledge and teaching; Foundations of the new reform.
Harvard Educational Review, Vol. 57, No. 1, pp. 1-22.
Rogers, D., & Webb, J. 1991. The Ethic of Caring in Teacher Education. Journal of Teacher Education, 42(3), 173–181.

Print Friendly, PDF & Email

1 comment on “ಎಲ್ಲ ಮಕ್ಕಳೂ ಕಲಿಯಬಲ್ಲರು

Leave a Reply

Your email address will not be published.

Scroll to top